ಹೆಸರಾಯಿತು ಕರ್ನಾಟಕ, ಉಸಿರಾಗಲಿಲ್ಲ ಕನ್ನಡ

ಹೆಸರಾಯಿತು ಕರ್ನಾಟಕ, ಉಸಿರಾಗಲಿಲ್ಲ ಕನ್ನಡ

ದಾವಣಗೆರೆ, ಡಿ. 7- ಹೆಸರಾಯಿತು ಕರ್ನಾಟಕ, ಉಸಿರಾಗಲಿಲ್ಲ ಕನ್ನಡ ಎನ್ನುವಂತಾಗಿದೆ. ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರೆ ಮಾತ್ರ ನೌಕರಿ ಸಿಗುತ್ತೇ, ಭವಿಷ್ಯವಿದೆ ಎಂಬ ಭ್ರಮೆಗೆ ನಾವೆಲ್ಲರೂ ಒಳಗಾಗಿದ್ದೇವೆ ಎಂದು ಚಿತ್ರದುರ್ಗ ಮುರುಘಾ ಮಠದ ಉಸ್ತುವಾರಿ ಶ್ರೀ ಬಸವ ಪ್ರಭು ಸ್ವಾಮೀಜಿ ಹೇಳಿದರು.

ನಗರದ ಶಿವಯೋಗಾಶ್ರಮದ ಆವರಣದಲ್ಲಿ ಅಖಂಡ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮೊನ್ನೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಕರ್ನಾಟಕಕ್ಕೆ ಮೈಸೂರು ರಾಜ್ಯವೆಂದು ಕರೆಯಲಾಗುತ್ತಿತ್ತು. ದೇವರಾಜ ಅರಸು ಆಡಳಿತಾವಧಿಯಲ್ಲಿ `ಕರ್ನಾಟಕ’ ಎಂದು ಮರು ನಾಮಕರಣ ಮಾಡಲಾಯಿತು. ಕನ್ನಡ ಮಾತನಾಡಿದಾಗ, ಪ್ರೀತಿಸಿದಾಗ, ಕಲಿತಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯವಿದೆ. ಇಲ್ಲದಿದ್ದರೆ ಜಾಗತೀಕರಣದ ಸಂದರ್ಭದಲ್ಲಿ ಕನ್ನಡ ಭಾಷೆ ತೊಂದರೆಗೆ ಒಳಗಾಗುತ್ತಿದೆ ಎಂಬ ಆತಂಕ ಎದುರಾಗಿದೆ ಎಂದರು.

ಪರಭಾಷಾ ವ್ಯಾಮೋಹದಿಂದ ಹೊರಬಂದು ಕನ್ನಡ ನಾಡಿನಲ್ಲಿ ಕನ್ನಡ ಉಳಿಸಲು ಕಂಕಣಬದ್ಧರಾಗಬೇಕಾಗಿದೆ ಎಂದು ಹೇಳಿದರು. 

ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ  ಜಿ.ಬಿ. ವಿನಯ್ ಕುಮಾರ್ ಮಾತನಾಡಿ, ಕನ್ನಡ ಭಾಷೆ ಏಕೆ ಉಳಿಯಬೇಕೆಂದರೆ ಮಾತೃಭಾಷೆ ನಮಗೆ ಸ್ವಾತಂತ್ರ್ಯವನ್ನು ಕೊಡುತ್ತದೆ. ಯೋಚನಾ ಲಹರಿಯನ್ನು ಬೆಳೆಸುತ್ತದೆ. ಕ್ರಿಯಾಶೀಲತೆ ಸಮಾಜದಲ್ಲಿ ಹೆಚ್ಚಾದಷ್ಟು ಅಭಿವೃದ್ಧಿ ಹೆಚ್ಚಾಗುತ್ತಾ ಹೋಗುತ್ತದೆ ಎಂದರು.

ಶೇ.70-80 ರಷ್ಟು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿಯೇ ವ್ಯಾಸಂಗ ಮಾಡಿರುತ್ತಾರೆ. ರಾಜ್ಯದಲ್ಲಿ ನಡೆಯುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು ಹೆಚ್ಚಾಗಿ ಆಂಗ್ಲಭಾಷೆಯಲ್ಲಿಯೇ ಇರುವುದರಿಂದ ವಿದ್ಯಾರ್ಥಿಗಳಿಗೆ ಕಷ್ಟವಾಗಿ ಪರಿಣಮಿಸುತ್ತದೆ. ಕನ್ನಡದಲ್ಲಿಯೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಬೇಕೆಂಬ ಆಶಯ ನನ್ನದಾಗಿದೆ ಎಂದು ಹೇಳಿದರು.

ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ಮಾಜಿ ಮಹಾಪೌರರಾದ ಬಿ.ಜಿ. ಅಜಯ್ ಕುಮಾರ್, ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಟಿ. ಶಿವಕುಮಾರ್ ಮಾತನಾಡಿದರು. ರೈತ ಮುಖಂಡ  ತೇಜಸ್ವಿ ವಿ. ಪಟೇಲ್ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ಪರ ಹೋರಾಟಗಾರ ನಾಗೇಂದ್ರ ಬಂಡೀಕರ್, ಕೆ.ಜಿ. ಶಿವಕುಮಾರ್, ಅವಿನಾಶ್ (ಅಭಿ), ಲಕ್ಷ್ಮಿದೇವಮ್ಮ, ಶೃತಿ ಇನಾಂದಾರ್, ಕೆ.ಎಸ್. ರೇವಣಸಿದ್ಧಪ್ಪ, ಕೆ. ಜೈಮುನಿ, ಶಶಿಧರ್,  ವೇದಿಕೆ ಕಾರ್ಯಾಧ್ಯಕ್ಷ ಎಸ್.ಜಿ. ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!