ಜಗಳೂರು, ಡಿ.7- ಪಟ್ಟಣದ ರುದ್ರಭೂಮಿಯಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಉಪಹಾರ ಸೇವನೆಯೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ಕಾರ್ಯಕ್ರಮ ಹಾಗೂ ಮೌಢ್ಯ ಪರಿವರ್ತನಾ ದಿನವನ್ನಾಗಿ ಆಚರಿಸಲಾಯಿತು.
ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ವಕೀಲ ಟಿ. ಬಸವರಾಜ್ ಮಾತನಾಡಿ, ಕಳೆದ ದಶಕದಿಂದ ಮಾನವ ಬಂಧುತ್ವ ವೇದಿಕೆಯ ರೂವಾರಿಗಳು ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಡಿಸೆಂಬರ್ 6 ರಂದು ಅಂಬೇಡ್ಕರ್ ಪರಿನಿರ್ವಾಣದ ಅಂಗವಾಗಿ ಬೆಳಗಾವಿಯ ಸದಾಶಿವ ನಗರದ ವೀರಶೈವ ರುದ್ರಭೂಮಿಯಲ್ಲಿ ಎರಡು ದಿನಗಳ ಕಾಲ ವೈಚಾರಿಕ, ವೈಜ್ಞಾನಿಕತೆ ಪ್ರಚಾರ, ಮೌಢ್ಯಮುಕ್ತಕ್ಕಾಗಿ ಆಯೋಜಿಸುತ್ತಿದ್ದ ಸ್ಮಶಾನ ವಾಸ್ತವ್ಯ ಕಾರ್ಯಕ್ರಮ ದಲ್ಲಿ ತಾಲ್ಲೂಕಿನಿಂದ ಭಾಗವಹಿಸಲಾಗುತ್ತಿತ್ತು.
ಪ್ರಸಕ್ತ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಸ್ಮಶಾನದಲ್ಲಿ ಉಪಹಾರ ಸೇವಿಸಿ ಮೌಢ್ಯತೆ ಪರಿವರ್ತನೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಮುಖಂಡ ಕಾನನಕಟ್ಟೆ ಪ್ರಭು ಮಾತನಾಡಿ, ಸಂವಿಧಾನದ ಆಶಯದಂತೆ ತಳ ಸಮುದಾಯಗಳು ಶಿಕ್ಷಣ ಪಡೆದು, ದೇವರುಗಳ ಹೆಸರಿನಲ್ಲಿ ನಡೆಸುವ ಮೂಢನಂಬಿಕೆ, ಕಂದಾಚಾರಗಳಿಂದ ಮುಕ್ತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಎಂದರು.
ವಕೀಲ ಸಣ್ಣ ಓಬಯ್ಯ ಮಾತನಾಡಿ, ದೇಶಕ್ಕೆ ಸಂವಿಧಾನವೇ ಪವಿತ್ರ ಗ್ರಂಥವಾಗಿದೆ. ಕೆಲವರಿಂದ ಸಂವಿಧಾನ ತಿರುಚುವ ಹುನ್ನಾರ ನಡೆಯತ್ತಿದೆ.ಸಂವಿಧಾನ ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಅದಕ್ಕೆ ದಕ್ಕೆ ಉಂಟಾದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆ ಪದಾಧಿಕಾರಿಗಳಾದ ಎ.ಡಿ.ನಾಗಲಿಂಗಪ್ಪ, ಧನ್ಯಕುಮಾರ್, ಎಚ್.ಎಂ.ಹೊಳೆ,
ಡಿಎಸ್ಎಸ್ ಸಂಚಾಲಕ ಸತೀಶ್, ಮಾದಿಹಳ್ಳಿ ಮಂಜುನಾಥ್, ಸಿದ್ದಮ್ಮನಹಳ್ಳಿ ಬಸವರಾಜ್ ಮುಂತಾದವರು ಇದ್ದರು.