ದಾವಣಗೆರೆ, ಡಿ. 7 – ನಗರದ ಹೊರವಲಯದಲ್ಲಿರುವ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ವಸತಿಯುತ ಶಾಲೆ ತೋಳಹುಣಸೆಯ ಶಿವಗಂಗೋತ್ರಿ ಮೈದಾನದಲ್ಲಿ ನಡೆದ 17 ವರ್ಷದೊಳಗಿನ ಅಂತರ್ ಶಾಲೆಯ ಶ್ರೀಮತಿ ಪಾರ್ವತಮ್ಮ ಮೆಮೋರಿಯಲ್ ಟ್ರೋಫಿ ಪಂದ್ಯಾವಳಿಯಲ್ಲಿ ಆತಿಥೇಯ ಪಿ.ಎಸ್.ಎಸ್.ಇ.ಎಮ್.ಆರ್ ಶಾಲಾ ತಂಡ ಹೊಸದುರ್ಗದ ಎಸ್.ಡಿ.ಎ ತಂಡವನ್ನು 93 ಓಟಗಳಿಂದ ಭರ್ಜರಿ ಜಯಗಳಿಸಿ ಪ್ರಶಸ್ತಿಯನ್ನು ತನ್ನಲ್ಲಿರಿಸಿಕೊಂಡಿತು.
ಅಂತಿಮ ಪಂದ್ಯದಲ್ಲಿ ಟಾಸ್ಕ್ ಸೋತು ಬ್ಯಾಟಿಂಗ್ ಮಾಡಿದ ಪಿ.ಎಸ್.ಎಸ್.ಇ.ಎಮ್ ಆರ್ ಶಾಲೆಯ ಆಕಾಶ್ ಅವರು 35 ಎಸೆತಗಳಲ್ಲಿ ಅಜೇಯ 62 ಓಟ ಮತ್ತು ಸಿದ್ಧಾರ್ಥ ಎಮ್ ಜಿ ಅವರು 23 ಎಸೆತಗಳಲ್ಲಿ ಅಜೇಯ 40 ಓಟಗಳ ಕಾರಣದಿಂದ ನಿಗದಿತ 10 ಓವರುಗಳಲ್ಲಿ ಒಂದು ಹುದ್ದರಿ ನಷ್ಟಕ್ಕೆ 122 ಓಟಗಳನ್ನು ಗಳಿಸಿತ್ತು. ಗೆಲ್ಲಲು 123 ಓಟಗಳನ್ನು ಬೆನ್ನು ಹತ್ತಿದ ಹೊಸದುರ್ಗದ ಎಸ್ಡಿಎ ಶಾಲೆ ತಂಡವು ಪಿ.ಎಸ್.ಎಸ್.ಇ.ಎಮ್.ಶಾಲಾ ತಂಡದ ಸಿದ್ಧಾರ್ಥ ಎಮ್ ಜಿ ಮತ್ತು ಯಶ್ ಶಿರಿಕರ್ ವೇಗದ ದಾಳಿಗೆ, ಅತ್ಯುತ್ತಮ ಕ್ಷೇತ್ರ ರಕ್ಷಣೆಯಿಂದ ಕೇವಲ 29 ಓಟಗಳಿಗೆ ಸರ್ವ ಪಥನಗೊಂಡಿತು. ಸಿದ್ಧಾರ್ಥ ಎಮ್.ಜಿ ಮೂರು ವಿಕೆಟ್ ಪಡೆದರು.
ಸರಣಿಯ ಅತ್ಯುತ್ತಮ ದಾಂಡಿಗ ಪ್ರಶಸ್ತಿ ಮತ್ತು ಸರಣಿಯ ಪುರುಷೋತ್ತಮ ಪ್ರಶಸ್ತಿಯನ್ನು ಪಿ.ಎಸ್.ಎಸ್.ಇ.ಎಮ್ ಆರ್ ಶಾಲೆಯ ಆಕಾಶ್ ಪಡೆದರೆ, ಸಿದ್ಧಾರ್ಥ ಎಮ್.ಜಿ ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು ಪಡೆದರು.
ಸಂಸ್ಥೆಯ ಮುಖ್ಯಸ್ಥ ಮಂಜನಾಥ ರಂಗರಾಜು ಅವರು ಪಾರ್ವತಮ್ಮ ಮೆಮೋರಿಯಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು. ಶಾಲೆಯ ಉಪ ಪ್ರಾಂಶುಪಾಲರಾದ ಉಮಾಪತಿ ಎಚ್.ಜಿ. ವಿಜೇತರಿಗೆ ಪ್ರಶಸ್ತಿ ವಿತರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ದೈಹಿಕ ಶಿಕ್ಷಣ ನಿರ್ದೇಶಕರಾದ ಸಂಜೀವ್ ಕುಮಾರ್, ಕನ್ನಡ ಉಪನ್ಯಾಸಕ ಶಂಕರ್ ನೆಶ್ವಿ, ಸ್ಕೋರರ್ ಮನೋಜ್, ಪಂದ್ಯಾವಳಿಯ ತೀರ್ಪುಗಾರರಾದ ವೆಂಕಟೇಶ್ ಮತ್ತು ಅಭಿಷೇಕ್ ಮುಂತಾದವರು ಉಪಸ್ಥಿತರಿದ್ದರು.