ಸಹನಾ ಭರತನಾಟ್ಯ ರಂಗ ಪ್ರವೇಶ

ಸಹನಾ ಭರತನಾಟ್ಯ ರಂಗ ಪ್ರವೇಶ

ದಾವಣಗೆರೆ, ಡಿ.7- ನಗರದ ಶ್ರೀ ಶಾರದಾ ಸಂಗೀತ ಮತ್ತು ನೃತ್ಯ ಕಲಾ ಶಾಲೆ ವಿದ್ಯಾರ್ಥಿನಿ, ವಿದುಷಿ ಪೂರ್ಣಿಮಾ ಭಾಗವತರ ಶಿಷ್ಯೆ, ವಿದುಷಿ ಬಿ. ಸಹನಾ  ಭರತನಾಟ್ಯ ರಂಗ ಪ್ರವೇಶ ಮಾಡಿದರು.

ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಮೊನ್ನೆ ಸಂಜೆ ನಡೆದ ರಂಗಪ್ರವೇಶ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನದ ಮೂಲಕ ರಂಗ ಪ್ರವೇಶ ಮಾಡಿದರು. ಭಾವಭಿನ್ನತೆಗೆ ಹೆಚ್ಚು ಅವಕಾಶವಿರುವ ವರ್ಣ ನೃತ್ಯದಲ್ಲಿ ಕಣ್ಮನ ಸೆಳೆಯುವ ಪ್ರದರ್ಶನ ನೀಡಿದ ಸಹನಾ ಪ್ರೇಕ್ಷಕರಿಂದ ಕರತಾಡನದ ಮೆಚ್ಚುಗೆ ಪಡೆದರು.

ವಿದ್ವಾನ್‌ ರಾಜಗೋಪಾಲ ಭಾಗವತರ ನೃತ್ಯ ಬಂಧಗಳ ರಚನೆ, ಸಾಹಿತ್ಯ, ಸಂಗೀತದ ಜತೆ ಶ್ರೀಮತಿ ಪೂರ್ಣಿಮಾ ಭಾಗವತರು ನೃತ್ಯ ಸಂಯೋಜನೆ ಮಾಡಿದ್ದರು. 

ಹಿಮ್ಮೇಳದಲ್ಲಿ ವಿದ್ವಾನ್‌ ಬಿ. ಶ್ರೀನಾಥ ಭಟ್‌ ಮೃದಂಗ, ವಿದ್ವಾನ್‌ ಎಂ. ಆರ್‌. ರಾಜೇಶ್‌ ಕೊಳಲು, ವಿದ್ವಾನ್‌ ಎಂ.ಆರ್‌. ಶ್ರೀಕಾಂತ್‌ ವಯೋಲಿನ್‌ ಸಾಥ್‌ ನೀಡಿದರು. ರಂಗಪ್ರವೇಶ ಮಾಡಿದ ವಿದುಷಿ ಸಹನಾ ದಾವಣಗೆರೆಯ ವರ್ತಕ ಬಸವರಾಜ ಬನ್ನೆಟ್ಟಿ ಮತ್ತು ರೇಣುಕಾ ದಂಪತಿಯ ಪುತ್ರಿ.

ನಾಲ್ಕನೇ ರಂಗ ಪ್ರವೇಶ : ರಂಗ ಪ್ರವೇಶ ಸಭಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಸಂಸ್ಥೆಯ ವಿದ್ವಾನ್‌ ರಾಜಗೋಪಾಲ ಭಾಗವತರು, ನಮ್ಮ ಸಂಸ್ಥೆಯಿಂದ ಭರತ ನಾಟ್ಯದಲ್ಲಿ ನಾಲ್ಕನೇ ರಂಗ ಪ್ರವೇಶವಿದು. 2013 ರಲ್ಲಿ ನಮ್ಮ ವಿದ್ಯಾರ್ಥಿನಿ ನಯನಾ ರಂಗ ಪ್ರವೇಶ ಮಾಡಿದರು. ನಂತರ ವಿದ್ಯಾರ್ಥಿನಿ ನಂದನಾ, ಡಾ. ಸಂಸ್ಕೃತಿ ರಂಗ ಪ್ರವೇಶ ಮಾಡಿದ್ದಾರೆ. ಬೆಂಗಳೂರಿನ ಶ್ರೀಮಂತರಿಗೆ ಸೀಮಿತವಾಗಿದ್ದ ರಂಗ ಪ್ರವೇಶವನ್ನು ನಮ್ಮ ಸಂಸ್ಥೆ ದಾವಣಗೆರೆ ನಗರದಲ್ಲಿ ಸಾಮಾನ್ಯ ಜನರಿಗೂ ಲಭ್ಯವಾಗುವಂತೆ ಆಯೋಜನೆ ಮಾಡಿದೆ. ಈ ಸಾಧನೆ ಹಿಂದೆ ಗುರುಗಳ ಶ್ರಮವೂ ಹೆಚ್ಚಿದೆ ಎಂದು ಹೇಳಿದರು.

ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳಿಗೆ ನಾವು  ಟ್ಯೂನ್‌ ಆಗಬೇಕು, ಅವರ ಮುಖ್ಯ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಸಂಸ್ಥೆ ಕಲಾಭ್ಯಾಸ ನೀಡುತ್ತಾ ಬರುತ್ತಿದೆ. ಇಂದು ಪ್ರತಿಭಾವಂತರಿಗಿಂತ ಒಳ್ಳೆಯವರು ಸಮಾಜಕ್ಕೆ ಬೇಕಿದೆ. ರಂಗ ಪ್ರವೇಶ ಮಾಡಿದ ಸಹನಾ ಸ್ನಾತಕೋತ್ತರ ಪದವಿ ಪಡೆದಿದ್ದು, ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. ಎಸ್‌ಎಸ್‌ಎನ್‌ಪಿಎಸ್‌ ಶಾಲೆಯ ಡೀನ್‌ ಮಂಜುನಾಥ ರಂಗರಾಜು ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಸದಾನಂದ ಹೆಗಡೆ, ವಿದ್ವಾನ್‌ ಡಾ. ಶಿವಶಂಕರ್‌, ಸಾಗರದ ವಿದ್ವಾನ್‌ ಜನಾರ್ಧನ್ ಇದ್ದರು.

error: Content is protected !!