ಕವಿತೆಗಳ ರಚನೆಗೂ ಲಯ ಅಗತ್ಯ: ಡಾ.ಹೇಮಾ ಪಟ್ಟಣ ಶೆಟ್ಟಿ

ಕವಿತೆಗಳ ರಚನೆಗೂ ಲಯ ಅಗತ್ಯ: ಡಾ.ಹೇಮಾ ಪಟ್ಟಣ ಶೆಟ್ಟಿ

ದಾವಣಗೆರೆ, ಡಿ.6- ಉಸಿರಾಟಕ್ಕೂ ಒಂದು ಲಯ ಇರುವಂತೆ ಕವಿತೆಗಳ ರಚನೆಗೂ ಲಯ ಇರಬೇಕು. ಪದ್ಯಕ್ಕೆ ಪ್ರಾಸವೇ ಬೇಕಿಲ್ಲ ಎಂದು ಹಿರಿಯ ಸಾಹಿತಿ  ಡಾ.ಹೇಮಾ ಪಟ್ಟಣ ಶೆಟ್ಟಿ ಹೇಳಿದರು.

ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ನಗರದ ರೋಟರಿ ಬಾಲಭವನದಲ್ಲಿ ಮೊನ್ನೆ ಏರ್ಪಾಡಾಗಿದ್ದ ಕಾವ್ಯ ಕುಂಚ-3, ಕವನ ಸಂಕಲನ, ಕುಂಚ ಕೈಪಿಡಿ ಕಿರುಹೊತ್ತಿಗೆ ಲೋಕಾರ್ಪಣೆ, ಕವಿಗೋಷ್ಠಿ ಸಮಾ ರಂಭದಲ್ಲಿ ಪುಸ್ತಕಗಳ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಚಪಾತಿ ಹಿಟ್ಟು ನಾದಿದಷ್ಟೂ ಚಪಾತಿ ಮೃದುವಾಗುತ್ತವೆ. ಹಾಗೆಯೇ ಭಾಷೆಯನ್ನು ಪಳಗಿಸಿಕೊಂಡಷ್ಟೂ ಕೃತಿ ಉತ್ತಮವಾಗಿ ಮೂಡಿ ಬರುತ್ತವೆ ಎಂದು ಹೇಳಿದರು.

ಪ್ರೀತಿ, ಪ್ರಣಯ, ಜಗಳ, ತುಂಟಾಟಗಳ ಮೂಲಕ ಭಾಷೆಯನ್ನು ಪಳಗಿಸಿಕೊಳ್ಳಬೇಕು. ಓದುವ ಅಭ್ಯಾಸ ಮೈಗೂಡಿಸಿಕೊಳ್ಳಬೇಕು. ಓದಿದ್ದನ್ನು ಮನನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾವ್ಯಗಳ ರಚನೆ ಮೂಲಕ ವ್ಯಕ್ತಿತ್ತವನ್ನು ಕಟ್ಟುವ ಅಗತ್ಯತೆ ಇಂದು ಹೆಚ್ಚಾಗಿದೆ. ಆ ಕೆಲಸವನ್ನು ಸಂಘ-ಸಂಸ್ಥೆಗಳು ಮಾಡುತ್ತಿವೆ. ಕಾವ್ಯ ಕುಂಚದಲ್ಲಿ 125 ಕವಿತೆಗಳಿವೆ. ಹೊಸದಾಗಿ ಬರವಣಿಗೆ ಆರಂಭಿಸಿದವರಿಗೆ ಇದೊಂದು ಉತ್ತಮ ವೇದಿಕೆಯೂ ಆಗಿದೆ ಎಂದು ಶ್ಲ್ಯಾಘಿಸಿದರು.

ಬದುಕಿನಲ್ಲಿ ಯಾವ ರೀತಿಯಲ್ಲೂದರೂ ಒಮ್ಮೆ ಬರವಣಿಗೆ ಆರಂಭವಾಗುತ್ತದೆ. ಅದರಲ್ಲೂ ಹದಿ ಹರೆಯದ ವೇಳೆ ಬರೆಯುವ ಬರವಣಿಗೆ ಸ್ಫುಟವಾಗಿರುತ್ತದೆ. ದಿನಕ್ಕೆ ಹತ್ತು ಕಾವ್ಯ ಬರೆದರೂ ಪರವಾಗಿಲ್ಲ. ಆದರೆ ಪ್ರಕಟ ಮಾಡುವಾಗ ಮತ್ತೆ ಮತ್ತೆ ತಿದ್ದಿಕೊಳ್ಳಿ ಎಂದು ಸಲಹೆ ನೀಡಿದರು. ಕಲಾಕುಂಚದ ಸಂಸ್ಥಾಪಕ ಸಾಲಿಗ್ರಾಮ ಗಣೇಶ್‌ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಎ.ಸಿ. ಶಶಿಕಲಾ ಶಂಕರಮೂರ್ತಿ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ಸಂಸ್ಥಾಪಕರಾದ ಜ್ಯೋತಿ ಗಣೇಶ ಶೆಣೈ, ಮಾಜಿ ಅಧ್ಯಕ್ಷರಾದ ಪರ್ವೀನ್ ಅಮೀರ್ ಜಾನ್ ಇತರರು ಉಪಸ್ಥಿತರಿದ್ದರು.

error: Content is protected !!