ಜಗಳೂರು, ಡಿ. 6 – ಮಾಜಿ ಸಂಸದ ಜಿ. ಮಲ್ಲಿಕಾರ್ಜುನಪ್ಪ ಮತ್ತು ಹಾಲಮ್ಮ ಚಾರಿಟಿ ಫೌಂಡೇಶನ್ ವತಿಯಿಂದ ಇದೇ ದಿನಾಂಕ 23 ರ ಶನಿವಾರ ಪಟ್ಟಣದ ನಳಂದಾ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಎಸ್.ವಿ. ರಾಮಚಂದ್ರ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ವಿವಿಧ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಇದು ಎಂಪಿ ಎಲೆಕ್ಷನ್ ಚುನಾವಣೆ ಗಿಮಿಕ್ ಅಲ್ಲ. ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ. ಜಿ.ಎಂ. ಸಿದ್ದೇಶ್ವರ ಅವರು ಆಯೋಜನೆ ಮಾಡಿದ್ದಾರೆ ಎಂದು ಹೇಳಿದರು.
ಹಿಂದುಳಿದ ಜಗಳೂರು ತಾಲ್ಲೂಕಿನಲ್ಲಿ ಮಾನವ ಸಂಪನ್ಮೂಲ ಅಧಿಕವಾಗಿದ್ದು, ಅತಿ ಹೆಚ್ಚು ಪದವಿ ಪಡೆದ ಯುವಕ-ಯುವತಿಯರಿದ್ದಾರೆ. ವಿದ್ಯಾಭ್ಯಾಸ ಮುಗಿಸಿ ಹೊರ ಬಂದಿರುವ ಯುವಕರಿಗೆ ಉದ್ಯೋಗ ಅವಕಾಶಗಳ ಮಹಾಪೂರವೇ ಹರಿಯಲಿದೆ. 10ನೇ ತರಗತಿ ಪಾಸ್ ಆದ ವಿದ್ಯಾರ್ಥಿಗಳಿಂದ ಸ್ನಾತಕೋತ್ತರ, ಎಂಬಿಎ, ಎಂಜಿನಿಯರಿಂಗ್ (ಎಲೆಕ್ಟ್ರಾನಿಕ್, ಮೆಕಾನಿಕಲ್, ಕೆಮಿಕಲ್), ಡಿಪ್ಲಮಾ, ಐಟಿಐ ಸೇರಿದಂತೆ ಕೌಶಲ್ಯ ಆಧಾರಿತ ಶಿಕ್ಷಣ ಪಡೆದ ಅಭ್ಯರ್ಥಿಗಳಿಗೆ ಸಾಕಷ್ಟು ಉದ್ಯೋಗ ಅವಕಾಶಗಳು ಲಭ್ಯವಾಗಲಿದೆ ಎಂದು ಜಿ.ಎಂ. ವಿವಿಯ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ಪ್ರೋ. ತೇಜಸ್ವಿ ಕಟ್ಟಿಮನಿ ತಿಳಿಸಿದರು.
ಈಗಾಗಲೇ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದ 52 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ. ನಳಂದಾ ಕಾಲೇಜ್ ಆವರಣದಲ್ಲಿ ಬೆಳಿಗ್ಗೆ 9ಗಂಟೆಗೆ ಉದ್ಯೋಗ ಮೇಳ ಆರಂಭಗಾಗಲಿದ್ದು ಆನ್‍ಲೈನ್ ನೋಂದಣಿ ಮತ್ತು ಸ್ಥಳದಲ್ಲೇ ನೋಂದಣಿಗೂ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಶುಲ್ಕ ಪಾವತಿ ಅಗತ್ಯವಿಲ್ಲ. ಒಬ್ಬ ಅಭ್ಯರ್ಥಿಗೆ ನಾಲ್ಕು ಕಂಪನಿಗಳಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ.
10 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಹೊಂದಿದ್ದು ಆಯ್ಕೆಯಾದ ಅಭ್ಯರ್ಥಿಗೆ ಆರಂಭದಿಂದ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವವರೆಗೂ ಚಾರಿಟಿ ಫೌಂಡೇಶನ್ ಜವಾಬ್ದಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಎಸ್. ಮಹೇಶ್, ಬಿಜೆಪಿ ಮುಖಂಡ ಶಿವಕುಮಾರ್ ಸ್ವಾಮಿ, ಪ.ಪಂ. ಸದಸ್ಯ ನವೀನ್, ಸತೀಶ್, ಸಿದ್ದಪ್ಪ ಪೂಜಾರಿ ಮುಂತಾದವರು ಇದ್ದರು.