ಜಿಗಳಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ

ಜಿಗಳಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ

ಮಲೇಬೆನ್ನೂರು, ಡಿ.6- ಜಿಗಳಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಡೆಯುತ್ತಿರುವ ಎನ್ನೆಸ್ಸೆಸ್‌ ಶಿಬಿರದ 5ನೇ ದಿನದಂದು ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಡಾ. ಬಿ.ಆರ್. ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು.

ಈ ವೇಳೆ ಮಾತನಾಡಿದ ಟಿ.ಹೆಚ್‌ಓ ಡಾ. ಪ್ರಶಾಂತ್‌ ಅವರು, ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ನಿರ್ಲಕ್ಷ್ಯ ಸಲ್ಲದು ಎಂದರು. 

ಅಪೂರ್ವ ಆಸ್ಪತ್ರೆಯ ಹೃದಯರೋಗ ಹಾಗೂ ಅರಿವಳಿಕೆ ತಜ್ಞ ಡಾ. ಅರ್ಜುನ್‌ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಆರೋಗ್ಯ ನಮ್ಮ ದೊಡ್ಡ ಸಂಪತ್ತಾಗಿದ್ದು, ಅದನ್ನು  ಜೋಪಾನವಾಗಿ ನೋಡಿಕೊಳ್ಳಬೇಕು. ದೈಹಿಕ ಶ್ರಮ, ಮಿತ ಹಾಗೂ ಪೌಷ್ಠಿಕ ಆಹಾರ ಅಗತ್ಯವಾಗಿದ್ದು, ದುಶ್ಚಟಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿವೆ ಎಂದು ಎಚ್ಚರಿಸಿದರು.

ಹೊಳೆಸಿರಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೇತನ್‌, ಅಪೂರ್ವ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಅಪೂರ್ವ, ತಾ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಉಮ್ಮಣ್ಣ, ತಾ.ಹಿರಿಯ ಪ್ರಾಥಮಿಕ ಸುರಕ್ಷಾಧಿಕಾರಿ ಸುಧಾಸುಲೇಖೆ ಮತ್ತು ಹಿರಿಯ ಆರೋಗ್ಯ ಸಹಾಯಕಿ ಭಾಗ್ಯಲಕ್ಷ್ಮಿ, ಆಶಾ ಕಾರ್ಯಕರ್ತರಾದ ನೇತ್ರಾವತಿ, ಲತಾ, ವನಜಾಕ್ಷಮ್ಮ, ಶಂಕ್ರಮ್ಮ ಹಾಗೂ ಅಪೂರ್ವ ಆಸ್ಪತ್ರೆಯ ಸಿದ್ದೇಶ್‌, ಮನು ಅವರುಗಳು ಜನರ ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂಡಿದ್ದರು.

ಗ್ರಾಮದ ಜಿ. ಆನಂದಪ್ಪ, ಜಿ.ಪಿ. ಹನುಮಗೌಡ, ಎಸ್‌ಡಿಎಂಸಿ ಅಧ್ಯಕ್ಷ ಬಿ.ಪ್ರಭಾಕರ್‌, ಶಿಬಿರದ ಕಾರ್ಯಕ್ರಮಾಧಿಕಾರಿಗಳಾದ ಡಾ. ಬಿ.ಕೆ. ಮಂಜುನಾಥ್‌, ಡಾ. ಸಿ. ಚಂದ್ರಶೇಖರ್‌, ಶಾಲೆಯ ಶಿಕ್ಷಕರಾದ ಮಲ್ಲಿಕಾರ್ಜುನ್‌, ಲಿಂಗರಾಜ್‌,
ಗುಡ್ಡಪ್ಪ, ಶ್ರೀನಿವಾಸ್‌ ರೆಡ್ಡಿ, ಪತ್ರಕರ್ತ ಪ್ರಕಾಶ್‌, ಕುಂಬಳೂರು ವಾಸು, ವಿಜಯಭಾಸ್ಕರ್‌ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!