ರಾಜಕೀಯ ತಿರುವು ಪಡೆದ ಹರಿಹರ ದರ್ಗಾ ರಸ್ತೆ ಕಾಮಗಾರಿ

ರಾಜಕೀಯ ತಿರುವು ಪಡೆದ ಹರಿಹರ ದರ್ಗಾ ರಸ್ತೆ ಕಾಮಗಾರಿ

ಹರಿಹರ, ಡಿ,6- ನಗರದ ತುಂಗಭದ್ರಾ ನದಿಯ ಹತ್ತಿರದ ದರ್ಗಾ ಮುಂಭಾಗದ ಬೀರೂರು ಸಮ್ಮಸಗಿ ರಸ್ತೆ ದುರಸ್ತಿಪಡಿಸಲು, ಇಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು  ಕಾಮಗಾರಿ ಆರಂಭಿಸಲು ಮುಂದಾಗಿದ್ದ ವೇಳೆ, ಒಂದು ಗುಂಪು ಕಾಮಗಾರಿ ಆರಂಭ ಮಾಡಿ ಎಂದು ಹೋರಾಟ ಮಾಡಿದರೆ ಇನ್ನೊಂದು ಗುಂಪು ಕಾಮಗಾರಿ ನಿಲ್ಲಿಸುವಂತೆ ತಡೆಯಲು ಮುಂದಾಗಿದ್ದರಿಂದ ಎರಡು ಗುಂಪುಗಳ ನಡುವೆ ನಡೆದ ಮಾತಿನ ಚಕಮಕಿಯಿಂದಾಗಿ ಕಾಮಗಾರಿ ರಾಜಕೀಯ ತಿರುವನ್ನು ಪಡೆದುಕೊಂಡ ಘಟನೆ ನಡೆಯಿತು.

ಈ ರಸ್ತೆ ಸಂಪೂರ್ಣ  ಹಾಳಾಗಿದ್ದು, ದುರಸ್ತಿ ಪಡಿಸುವಂತೆ ಆಗ್ರಹಿಸಿ ಕಳೆದ ಹತ್ತು ದಿನಗಳಿಂದ ಜಯ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ವಿವಿಧ ರೀತಿಯ ಹೋರಾಟ ನಡೆದುಕೊಂಡು ಬಂದಿದ್ದರಿಂದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನಿನ್ನೆ ರಸ್ತೆಯನ್ನು ಸರ್ವೆ ಮಾಡಿ ಇಂದು ಬೆಳಿಗ್ಗೆ ಜೆಸಿಬಿ ಯಂತ್ರದ ಮೂಲಕ ಕಾಮಗಾರಿ ಆರಂಭಿಸಿದರು. 

ಆರಂಭ ಮಾಡಿ ಸ್ವಲ್ಪ ಸಮಯದ ನಂತರ ಕಾಮಗಾರಿ ಸ್ಥಗಿತಗೊಳಿಸಲಾಯಿತು.  ಜಯ ಕರ್ನಾಟಕ ಸಂಘಟನೆಯ ಮುಖಂಡ ಗೋವಿಂದ ಸೇರಿದಂತೆ, ಹಲವು ಸಂಘಟನೆಗಳ ಯುವಕರು ಸ್ಥಳಕ್ಕೆ ಆಗಮಿಸಿ ಕಾಮಗಾರಿ ನಿಲ್ಲಿಸಲು ಕಾರಣ ಏನು ಎಂಬುದನ್ನು ತಿಳಿಸಬೇಕು ಎಂದು ಅಧಿಕಾರಿಗಳ ಬಳಿ ಪಟ್ಟು ಹಿಡಿದು, ರಸ್ತೆಯನ್ನು ಬಂದ್ ಮಾಡಿ ರಸ್ತೆಯಲ್ಲಿ ಶಾಮಿಯಾನ ಹಾಕಿ ಪ್ರತಿಭಟನೆ ಮಾಡಲು ಮುಂದಾದರು.  ಆಗ ವಾಹನಗಳ ಸಂಚಾರಕ್ಕೆ ಅಡ್ದಿ ಉಂಟಾಗಿತ್ತು. ಪೊಲೀಸರು ಪರ್ಯಾಯ ವ್ಯವಸ್ಥೆ ಮಾಡುವ ಮೂಲಕ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಟ್ಟರು.

ಈ ವೇಳೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಕೆ.ಎನ್. ಶಿವಮೂರ್ತಿ   ಮಾತನಾಡಿ, ಶಾಸಕ ಬಿ.ಪಿ. ಹರೀಶ್‌ರವರು   ಅಧಿವೇಶನದಲ್ಲಿ ಇರುವುದರಿಂದ, ನಾನು ಬಂದು ಸ್ಥಳ ಪರಿಶೀಲನೆ ನಡೆಸಿದ ನಂತರ ಕಾಮಗಾರಿ ಆರಂಭ ಮಾಡಿ ಎಂದು ಹೇಳಿದ್ದಾರೆ. ಹಾಗಾಗಿ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸ ಲಾಯಿತು ಎಂದು ಹೇಳಿದರು.

ಈ ವೇಳೆ ಜಯಕರ್ನಾಟಕ ಸಂಘಟನೆಯ ಮುಖಂಡ ಗೋವಿಂದ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ನಗರಸಭೆ ಸದಸ್ಯರಾದ ಕೆ.ಜಿ. ಸಿದ್ದೇಶ್, ಮುಜಾಮಿಲ್‌ ಬಿಲ್ಲು, ದಾದಾ ಖಲಂದರ್, ಮುಖಂಡ ದಾದಾಪೀರ್ ಭಾನುವಳ್ಳಿ ಸೇರಿದಂತೆ ಇತರರು ರಸ್ತೆಯ ಕಾಮಗಾರಿ ಬೇಗನೆ ಆರಂಭಿಸಬೇಕು ಎಂದು  ಒತ್ತಡ ಹೇರುವ ಮೂಲಕ ರಸ್ತೆಯಲ್ಲಿ ಧರಣಿ ಕುಳಿತುಕೊಳ್ಳಲು ಮುಂದಾದರು. 

ಸ್ಥಳಕ್ಕೆ ಆಗಮಿಸಿದ ದಾವಣಗೆರೆ ಲೋಕೋಪಯೋಗಿ ಇಲಾಖೆ ಎಇಇ ನರೇಂದ್ರ ಬಾಬು, ನಾನು ಜಿಲ್ಲಾಧಿಕಾರಿಗಳಿಗೆ ಮತ್ತು ಇದಕ್ಕೆ ಸಂಬಂಧಿಸಿದಂತೆ ರಾಜ್ಯದ ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿದ್ದು, ಕಾಮಗಾರಿ ಆರಂಭ ಮಾಡುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಪುನಃ ಕಾಮಗಾರಿ ಆರಂಭಿಸಿದರು.

ನಂತರ ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ದೂಡಾ ಮಾಜಿ ಸದಸ್ಯ ರಾಜು ರೋಖಡೆ, ಶೇರಾಪುರ ಅಜ್ಜಪ್ಪ, ವಿನಾಯಕ ಆರಾಧ್ಯಮಠ ಇತರೆ ಬಿಜೆಪಿ ಮುಖಂಡರು ಆಗಮಿಸಿ, ಕಾಮಗಾರಿ ಮಾಡುತ್ತಿದ್ದ ಜೆಸಿಬಿ ಯಂತ್ರವನ್ನು ಬಂದ್ ಮಾಡಿಸಿ, ನಾಳೆ ಶಾಸಕ ಬಿ.ಪಿ. ಹರೀಶ್ ಆಗಮಿಸುತ್ತಾರೆ, ಅವರು ಬಂದು ಸ್ಥಳ ಪರಿಶೀಲನೆ ನಡೆಸಿದ ನಂತರ ಕಾಮಗಾರಿ ಮಾಡುವಂತೆ ಪಟ್ಟು ಹಿಡಿದ ಪರಿಣಾಮ ಅಧಿಕಾರಿಗಳ ತಂಡವು ತಮಗೆ ಏನು ಮಾಡಬೇಕೆಂದು ತೋಚದೆ ಮರದ ಕೆಳಗೆ ಹೋಗಿ ನಿಂತುಕೊಂಡಿತು.

ಪಿಎಸ್ಐ ದೇವಾನಂದ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್  ಮಾಡಿದ್ದರು. ದಲಿತ ಸಂಘರ್ಷ ಸಮಿತಿ ಸಂಚಾಲಕ ಪಿ.ಜೆ. ಮಹಾಂತೇಶ್, ಗುತ್ತಿಗೆದಾರ ಶಿವಕುಮಾರ್,  ನಾಯ್ಕ್ ಕಾರ್ತಿಕ್, ದಾದಾಪೀರ್ ಮತ್ತಿತರರು ಹಾಜರಿದ್ದರು.

error: Content is protected !!