ಮೊರಾರ್ಜಿ ಶಾಲಾ ಕಟ್ಟಡ ಕಾಮಗಾರಿ ಪರಿಶೀಲಿಸಿದ ಶಾಸಕ ಬಸವಂತಪ್ಪ

ಮೊರಾರ್ಜಿ ಶಾಲಾ ಕಟ್ಟಡ ಕಾಮಗಾರಿ ಪರಿಶೀಲಿಸಿದ ಶಾಸಕ ಬಸವಂತಪ್ಪ

ದಾವಣಗೆರೆ, ಡಿ. 6 – ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ವಡೇರಹಳ್ಳಿ ಗ್ರಾಮದಲ್ಲಿ 17 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆ ನಿರ್ಮಾಣ ಕಾಮಗಾರಿಯನ್ನು ಶಾಸಕ ಕೆ.ಎಸ್.ಬಸವಂತಪ್ಪ ಅವರು ನಿನ್ನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಲ್ಪಸಂಖ್ಯಾತರ ಇಲಾಖೆಯಡಿ ವಡೇರಹಳ್ಳಿ ಗ್ರಾಮದಲ್ಲಿ 14 ಎಕರೆ ಪ್ರದೇಶದ ಒಂದೇ ಕ್ಯಾಂಪಸ್‌ನಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗೆ 8.50 ಕೋಟಿ ರೂ. ವೆಚ್ಚದಲ್ಲಿ ಬಾಲಕ-ಬಾಲಕಿಯರ ವಸತಿಯುತ ಶಾಲೆ ಮತ್ತು 8.50 ಕೋಟಿ ರೂ. ವೆಚ್ಚದಲ್ಲಿ ಬಾಲಕಿಯರ ವಸತಿಯುತ ಶಾಲೆ ನಿರ್ಮಾಣ ಮಾಡಲಾಗುತ್ತಿದೆ.

ಕಳಪೆ ಕಾಮಗಾರಿ ಆಗದಂತೆ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಎಚ್ಚರ ವಹಿಸಬೇಕು. ಒಂದು ವೇಳೆ ಸಾರ್ವಜನಿಕರಿಂದ ಕಳಪೆ ಕಾಮಗಾರಿ ಆಗಿದೆ ಎಂಬ ದೂರುಗಳು ಬಾರದ ರೀತಿ ಗುಣಮಟ್ಟದ ಶಾಶ್ವತ ಕಾಮಗಾರಿ ನಡೆಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿಸಬೇಕೆಂದು ತಾಕೀತು ಮಾಡಿದರು.

ಮೊರಾರ್ಜಿ ವಸತಿಯುತ ಶಾಲೆಯ ಪಕ್ಕದಲ್ಲಿ ಹಳ್ಳ ಹರಿಯುತ್ತದೆ. ಧಾರಾಕಾರವಾಗಿ ಮಳೆ ಸುರಿದಾಗ ಹಳ್ಳ ತುಂಬಿ ಹರಿದು ಈ ಪ್ರದೇಶ ಜಲಾವೃತಗೊಳ್ಳುತ್ತದೆ. ಹೀಗಾಗಿ ಇಲ್ಲಿ ತಡೆಗೋಡೆ ನಿರ್ಮಿಸಿ ಶಾಲೆಯ ಆವರಣದಲ್ಲಿ ನೀರು ನುಗ್ಗದಂತೆ ಕ್ರಮ ವಹಿಸಬೇಕೆಂದು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಗಳು ಎಂಜನಿಯರ್, ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.

error: Content is protected !!