ದಾವಣಗೆರೆ, ಡಿ. 6 – ಇತ್ತೀಚಿಗೆ ಹುತಾತ್ಮರಾದ ವೀರಯೋಧ ಪ್ರಾಂಜಲ್ ಅವರಿಗೆ ಸಿದ್ಧಗಂಗಾ ಸ್ಕೌಟ್ಸ್ ಗೈಡ್ಸ್ ವತಿಯಿಂದ ಮೇಣದ ಬತ್ತಿಗಳನ್ನು ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸ್ಕೌಟ್ಸ್ ಗೈಡ್ಸ್‌ನ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಎಂ. ಸಿ. ಮಹೇಶ್ ಪ್ರಾಂಜಲ್ ಪರಿಚಯ ಮಾಡುತ್ತಾ, ಅವರ ಅನನ್ಯ ದೇಶಪ್ರೇಮವನ್ನು ಕೊಂಡಾಡಿದರು. ರಾಷ್ಟ್ರಪತಿ ಪುರಸ್ಕೃತರಾಗಿದ್ದ ಪ್ರಾಂಜಲ್ ಅವರು ಎಲ್ಲ ಸ್ಕೌಟ್ಸ್-ಗೈಡ್ಸ್‌ನವರಿಗೆ ಮಾದರಿಯಾಗಿದ್ದಾರೆ ಎಂದರು.
ಆಗರ್ಭ ಶ್ರೀಮಂತ ಸುಶಿಕ್ಷಿತ ಕುಟುಂಬದ ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆಗೈದು ತನ್ನ ಪ್ರಾಣವನ್ನು ತಾಯ್ನೆಲಕ್ಕೆ ಸಮರ್ಪಿಸಿದ ಪ್ರಾಂಜಲ್ ರವರು ಶ್ರೇಷ್ಠ ಸಂದೇಶ ನೀಡಿದ್ದಾರೆ ಎಂದು ಸ್ಕೌಟ್ಸ್ ಅಧ್ಯಕ್ಷೆ ಜಸ್ಟಿನ್ ಡಿಸೌಜ ಹೇಳಿದರು. ಎಲ್.ಟಿ. ಶಶಿಕಲಾ, ಗೈಡ್ಸ್ ಎಡಿಸಿ ರೇಖಾರಾಣಿ, ಸ್ಕೌಟ್ ಮಾಸ್ಟರ್ ಆರೋಗ್ಯಮ್ಮ, ಸುನೀತಾ ಮತ್ತಿತರರು ಮಕ್ಕಳೊಡನೆ ಭಾಗವಹಿಸಿ ಶ್ರದ್ಧಾಂಜಲಿ ಸಲ್ಲಿಸಿದರು.