ಎಐಯುಟಿಯುಸಿ ಜಿಲ್ಲಾ ಸಮ್ಮೇಳನದಲ್ಲಿ ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ. ಸೋಮಶೇಖರ್ ವ್ಯಾಕುಲತೆ
ದಾವಣಗೆರೆ, ಡಿ. 3- ಆಳುವ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ. ಕಾರ್ಮಿಕರ ಅನುಕೂಲಕ್ಕಾಗಿ ಇರುವ ಅಲ್ಪ ಸ್ವಲ್ಪ ಕಾರ್ಮಿಕ ಕಾಯಿದೆಗಳನ್ನು ಸಹ ತಿದ್ದುಪಡಿ ಮಾಡಿ ನಾಲ್ಕು ಸಂಹಿತೆಗಳನ್ನಾಗಿ ಮಾಡಲು ಹೊರಟಿರುವ ಸರ್ಕಾರ ಕಾರ್ಮಿಕರ ಜೀವನವನ್ನು ಮತ್ತಷ್ಟು ದುರ್ಬಲಗೊಳಿಸುತ್ತಿದೆ ಎಂದು ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ. ಸೋಮಶೇಖರ್ ಹೇಳಿದರು.
ನಗರದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜನೆಗೊಂಡಿದ್ದ ಎಐಯುಟಿಯುಸಿ ಜಿಲ್ಲಾ ಸಮ್ಮೇಳನದ ಪ್ರಮುಖ ಭಾಷಣಕಾರರಾಗಿ ಅವರು ಮಾತನಾಡಿದರು.
ಇಂದು ಕಾರ್ಮಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅನೇಕ ಹೋರಾಟಗಳಿಂದ ಕಾರ್ಮಿಕರು ತಮ್ಮ ಹಕ್ಕುಗಳನ್ನು ಅಲ್ಪ ಮಟ್ಟಿಗೆ ಪಡೆದಿದ್ದಾರೆ.
ಇಎಸ್ಐ, ಇಪಿಎಫ್, ಕನಿಷ್ಠ ವೇತನವನ್ನು ಪಡೆಯಲು ಸಹ ಕಾರ್ಮಿಕರು ಹೋರಾಟ ಮಾಡುವಂತಹ ಪರಿಸ್ಥಿತಿ ಎದುರಾಗಿದೆ ಎಂದರು. ಹೆಸರಿಗಷ್ಟೇ ಕಾರ್ಮಿಕ ಇಲಾಖೆ ಇದ್ದು ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವಲ್ಲಿ ಸರಿಯಾದ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಕೆಲಸವನ್ನು ನಿರ್ವಹಿಸಬೇಕಾಗಿದೆ ಎಂದು ಹೇಳಿದರು.
ಹತ್ತು ಹದಿನೈದು ವರ್ಷಗಳಿಂದ ಗುತ್ತಿಗೆ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿದ ಕಾರ್ಮಿಕರಿಗೆ ಯಾವುದೇ ಭದ್ರತೆ ಇಲ್ಲ. ಆಶಾ ಅಂಗನವಾಡಿ, ಬಿಸಿಯೂಟ ನೌಕರರಿಗೆ ಗೌರವ ಧನ ಹೆಸರಿನಲ್ಲಿ ಪುಕ್ಕಟೆಯಾಗಿ ದುಡಿಸಿಕೊಳ್ಳುತ್ತಿದೆ. ಸರ್ಕಾರ ನೀಡುವ ಪ್ರೋತ್ಸಾಹ ಧನ ಆಶಾ ಕಾರ್ಯಕರ್ತೆಯರಿಗೆ ಜೀವನ ನಿರ್ವಹಣೆ ಮಾಡಲು ಸಾಕಾಗುತ್ತಿಲ್ಲ ಎಂದರು.
ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೆ ಏರಿದ್ದು, ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನ ನೌಕರರ ಜೀವನ ನಿರ್ವಹಣೆಗೆ ಅಸಾಧ್ಯವಾಗಿದೆ. ಆದ್ದರಿಂದ ಸರ್ಕಾರವು ಕನಿಷ್ಠ ವೇತನ ರೂ. 35,000ಗಳನ್ನು ನಿಗದಿಪಡಿಸಬೇಕಾಗಿದೆ ಎಂದು ಆಗ್ರಹಿಸಿದರು.
ಸರ್ಕಾರಗಳು ಖಾಸಗೀಕರಣ, ಉದಾರೀಕರಣ ಎಂಬ ಹೆಸರಿನಲ್ಲಿ ಕಾರ್ಮಿಕರ ಶೋಷಣೆಯನ್ನು ಮಾಡುತ್ತಿವೆ. ಶಿಕ್ಷಣ, ಆರೋಗ್ಯ, ಬ್ಯಾಂಕ್, ರೈಲ್ವೆ ಮುಂತಾದ ಸಾರ್ವಜನಿಕ ಸರ್ಕಾರಿ ವಲಯಗಳನ್ನು ಖಾಸಗಿಕರಣ ಗೊಳಿಸುತ್ತಿವೆ. ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ ಈ ಬಂಡವಾಳಶಾಹಿ ವ್ಯವಸ್ಥೆಯಾಗಿದ್ದು, ಎಲ್ಲಾ ಸೌಕರ್ಯಗಳು ಮಾಲೀಕರ ಪರವಾಗಿವೆ ಆದ್ದರಿಂದ ಕಾರ್ಮಿಕರೆಲ್ಲರೂ ಒಗ್ಗಟ್ಟಾಗಿ ಎಲ್ಲ ಶೋಷಣೆಗಳನ್ನು ಮುಕ್ತಗೊಳಿಸಲು ಸಂಘಟನೆಯನ್ನು ಬಲಪಡಿಸಿ ಹೋರಾ ಟಗಳನ್ನು ಬೆಳೆಸಬೇಕೆಂದು ಕಾರ್ಮಿಕರಿಗೆ ಕರೆ ನೀಡಿದರು.
ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಸೋಮ ಶೇಖರ್ ಯಾದಗಿರಿ ಮಾತನಾಡಿ, ಬೆಂಗಳೂರಿನಲ್ಲಿ ಈಚೆಗೆ ನಡೆದ ಮಹಾಧರಣಿಯಲ್ಲಿ ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ರೈತರು ಕಾರ್ಮಿಕರು, ದುಡಿಯುವ ವರ್ಗದ ಜನತೆ ಒಗ್ಗಟ್ಟಾಗಿ ಮೂರು ದಿನಗಳ ಕಾಲ ಹೋರಾಟವನ್ನು ನಡೆಸಿದ್ದಾರೆ. ಇಂತಹ ಹೋರಾಟಗಳು ಹಾಗೂ ಕಾರ್ಮಿಕರ ಐಕ್ಯತೆ ಇಂದಿನ ವ್ಯವಸ್ಥೆಯಲ್ಲಿ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಸ್ಟಾಫ್ ಫೆಡರೇಶನ್ ಮಾಜಿ ಅಧ್ಯಕ್ಷ ಎಂ.ಆರ್. ಹಿರೇಮಠ್ ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇದುವರೆಗೂ ಎಲ್ಲೂ ಕೂಡ ಗುತ್ತಿಗೆ ಪದ್ಧತಿ ಇರಲಿಲ್ಲ. ಆದರೆ ಇತ್ತೀಚಿನ ನಮ್ಮನ್ನ ಆಳುವ ಸರ್ಕಾರಗಳು ಬ್ಯಾಂಕಿಂಗ್ ಸೆಕ್ಟರ್ ಗಳಲ್ಲೂ ಸಹ ಗುತ್ತಿಗೆ ಆಧಾರದ ಮೇಲೆ ನೌಕರರನ್ನು ನೇಮಿಸಿಕೊಳ್ಳಲಾಗುತ್ತಿದೆ.
ಇದು ಎಲ್ಲಾ ಬ್ಯಾಂಕುಗಳ ಖಾಸಗಿಕರಣಕ್ಕೆ ಹಾಗೂ ಕಾಯಂ ಸ್ವರೂಪದ ಉದ್ಯೋಗಗಳ ನಾಶಕ್ಕೆ ನಾಂದಿಯಾಗಿದೆ, ಇಂಥ ಅನಿಷ್ಟ ಪದ್ದತಿಯ ವಿರುದ್ಧ ಎಲ್ಲಾ ಕಾರ್ಮಿಕರು ಸಾರ್ವಜನಿಕರು ಒಗ್ಗಟ್ಟಾಗಿ ಹೋರಾಟ ನಡೆಸಬೇಕೆಂದು ಕರೆ ನೀಡಿದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಮಂಜುನಾಥ್ ಕೈದಾಳೆ ವಹಿಸಿದ್ದರು ಮಂಜುನಾಥ್ ಕುಕ್ಕುವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನೆಯ ತಿಪ್ಪೇಸ್ವಾಮಿ ಅಣಬೇರು, ಶಿವಾಜಿರಾವ್, ಪ್ರಕಾಶ್ ಹಾವೇರಿ ಹಾಗೂ ಇತರರು ಭಾಗವಹಿಸಿದ್ದರು.
ಪದಾಧಿಕಾರಿಗಳ ಆಯ್ಕೆ : ಸಂಘಟನೆಯ ಜಿಲ್ಲಾ ಅಧ್ಯಕ್ಷರಾಗಿ ಮಂಜುನಾಥ್ ಕೈದಾಳೆ, ಉಪಾಧ್ಯಕ್ಷರಾಗಿ ಶಿವಾಜಿರಾವ್, ಪರಮೇಶ್ವರಪ್ಪ ಯುಬಿಡಿಟಿ, ಬೀರಲಿಂಗಪ್ಪ ವಿಂಡ್, ಕಾರ್ಯದರ್ಶಿಯಾಗಿ ಮಂಜುನಾಥ್ ಕುಕ್ಕುವಾಡ, ಜಂಟಿ ಕಾರ್ಯದರ್ಶಿಯಾಗಿ ತಿಪ್ಪೇಸ್ವಾಮಿ ಅಣಬೇರು, ಪ್ರಕಾಶ್ ಹಾವೇರಿ, ರವಿಕುಮಾರ್, ನಿಂಗಪ್ಪ, ಈಶ್ವರ್, ನಾಗವೇಣಿ, ಲಲಿತಮ್ಮ ಆಯ್ಕೆಯಾಗಿದ್ದಾರೆ.