ಕದಳಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ಪಿ.ಎಚ್. ಶಾಂತಲಾ
ದಾವಣಗೆರೆ,ಡಿ. 3 – ಕದಳಿ ಮಹಿಳಾ ವೇದಿಕೆ ತಾಲ್ಲೂಕು ಘಟಕದಿಂದ 148 ನೇ ಕಮ್ಮಟದಲ್ಲಿ ಲಿಂ|| ಷಡಾಕ್ಷರಪ್ಪ ಮತ್ತು ಶ್ರೀಮತಿ ಬಿ. ಅಂಜಿನಮ್ಮ ಕಲಪನಹಳ್ಳಿ ದತ್ತಿ, ಕನ್ನಡ ರಾಜ್ಯೋತ್ಸವ, ಶರಣ ಕೋಲ ಶಾಂತಯ್ಯನವರ ಜಯಂತಿಯನ್ನು ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು.
ನಮ್ಮ ದಿನನಿತ್ಯದ ವ್ಯವಹಾರದಲ್ಲಿ ನಾವು ಕನ್ನಡ ಬಳಸಬೇಕು. ನಾವು ಕನ್ನಡ ಬಳಸಿದರೆ ಮಾತ್ರ ಕನ್ನಡ ಉಳಿಯುತ್ತದೆ ಎಂದು ಕವಿವಾಣಿಗಳನ್ನು ಉದಾಹರಿಸುತ್ತಾ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಗಾಯತ್ರಿ ವಸ್ತ್ರದ್ ತಿಳಿಸಿದರು.
ಕನ್ನಡ ಸಾಹಿತ್ಯದ ಇತಿಹಾಸದಲ್ಲಿ 12ನೇ ಶತಮಾನ ಒಂದು ಪ್ರಮುಖ ಘಟ್ಟ. ಈ ಶತಮಾನದಲ್ಲಿ `ವಚನ’ ಎಂಬ ಹೊಸ
ಸಾಹಿತ್ಯ ಉದಯವಾಯಿತು.
ವಚನ ಸಾಹಿತ್ಯ ಕನ್ನಡ ಸಾಹಿತ್ಯದಲ್ಲಿ ಪ್ರಭಾವಶಾಲಿಯಾಗಿ ಆತ್ಮ ವಿಮರ್ಶೆಯ ಮಾಧ್ಯಮವಾಗಿ, ಸ್ವತಂತ್ರವಾಗಿ ಬೆಳೆದು ವಿಜೃಂಭಿಸಿ ಮುಂದಿನ ಸಾಹಿತ್ಯ ಪರಂಪರೆಯ ಮೇಲೆ ಪ್ರಭಾವ ಬೀರಿ ಕನ್ನಡ ಸಾಹಿತ್ಯದಲ್ಲಿ ಮಾತ್ರವಲ್ಲದೇ, ವಿಶ್ವ
ಸಾಹಿತ್ಯದಲ್ಲಿ ಒಂದು ಅವಿಭಾಜ್ಯ ಅಂಗವಾಗಿದೆ ಎಂದು `ಕನ್ನಡ ಸಾಹಿತ್ಯಕ್ಕೆ ವಚನಕಾರರ ಕೊಡುಗೆ’ ವಿಷಯದ ಬಗ್ಗೆ ಉಪನ್ಯಾಸಕರಾದ ಶ್ರೀಮತಿ ಪಿ.ಎಚ್. ಶಾಂತಲಾ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕಾಲೇಜಿನ ಪ್ರಾಂಶುಪಾಲ ಪಂಚಾಕ್ಷರಪ್ಪ ಅವರು ವಿದ್ಯಾರ್ಥಿಗಳಿಗೆ ಶರಣರ ನಡೆ-ನುಡಿ ಹಾಗೂ ಸಮಯದ ಮಹತ್ವವನ್ನು ವಿವರಿಸಿದರು. ನಂದಿನಿ ಹಾಗೂ ಲಕ್ಷ್ಮಿ ಅವರು ದತ್ತಿ, ದತ್ತಿ ದಾನಿಗಳನ್ನು ಪರಿಚಯಿಸಿದರು.
ದತ್ತಿ ದಾನಿಗಳು ಹಾಗೂ ಪಾರಂಪರಿಕ ವೈದ್ಯರಾದ ಶ್ರೀಮತಿ ಮಮತಾ ನಾಗರಾಜ್ ವಿದ್ಯಾರ್ಥಿಗಳು ಏಕಾಗ್ರತೆ ಹಾಗು ಶಿಸ್ತನ್ನು ಅಳವಡಿಸಿಕೊಳ್ಳಬೇಕು, ತಾವುಗಳು ಮಾಡಿದ ಸಹಾಯ ಹಾಗೂ ಸೇವೆಯನ್ನು ಬರೆದಿಟ್ಟುಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಮತ್ತು ಇತರರು ಭಾಗವಹಿಸಿದ್ದರು.
ಶ್ರೀಮತಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಸಂತ ಅವರು ಸ್ವಾಗತಿಸಿದರು.