ತಾಯಿಗೆ ಕೊಡುವ ಗೌರವ ಭಾಷೆಗೂ ಕೊಡಬೇಕು

ತಾಯಿಗೆ ಕೊಡುವ ಗೌರವ ಭಾಷೆಗೂ ಕೊಡಬೇಕು

ಹುಣಸಘಟ್ಟದಲ್ಲಿ ಜರುಗಿದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಹಿತಿ ಸಂಗನಾಳ ಮಠ  

ಹೊನ್ನಾಳಿ, ಡಿ. 3 – ಮರಗಳು ಎಷ್ಟೇ ದೊಡ್ಡದಾಗಿ ಹರಡಿದ್ದರೂ, ಅದರ ಬೇರುಗಳು ತನ್ನ ಮೂಲವನ್ನು ಗಟ್ಟಿಯಾಗಿ ಹಿಡಿದಿರುತ್ತವೆ. ಅದರಂತೆ ನಾವು  ನಮ್ಮ ಮಾತೃ ಭಾಷೆಯನ್ನು ಮರೆಯಬಾರದು ಎಂದು ಹಿರಿಯ ಸಾಹಿತಿ ಯು. ಎನ್. ಸಂಗನಾಳ ಮಠ  ಅವರು ಹೇಳಿದರು 

ತಾಲ್ಲೂಕಿನ  ಹುಣಸಘಟ್ಟ  ಗ್ರಾಮದಲ್ಲಿ ಹೊನ್ನುಡಿ ಕನ್ನಡ ವೇದಿಕೆ, ಗ್ರಾಮ ಪಂಚಾಯಿತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ  ಕರ್ನಾಟಕ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು  ಮಾತನಾಡುತ್ತಿದ್ದರು.

ಎರಡೂವರೆ ಸಾವಿರ ವರ್ಷಗಳ ಇತಿಹಾಸ ಇರುವ ಕನ್ನಡ ನಾಡಿನಲ್ಲಿ ನಾವೆಲ್ಲರೂ ಜೀವಿಸುತ್ತಿರುವುದು ನಮ್ಮ ಸೌಭಾಗ್ಯ. ಈ ಕನ್ನಡ ನಾಡಿನಲ್ಲಿ, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂದು ಹೇಳಿದರೆ ತಪ್ಪಾಗಲಾರದು. ಕನ್ನಡ ಅಂಕೆ ಬಳಸಿರಿ, ಶುದ್ದ ಕನ್ನಡ ಬರಹ, ಓದುವುದನ್ನು ಕಲಿಯಿರಿ, ಇದು ನಮ್ಮ ಮಾತೃಭಾಷೆ.  ನಮ್ಮ ತಾಯಿಗೆ ಕೊಡುವ ಗೌರವವನ್ನು ಭಾಷೆಗೂ ಸಹಾ ಕೊಡುವ ಮೂಲಕ ಭಾಷಾಭಿಮಾನಿಗಳಾಗಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹೊನ್ನುಡಿ ಕನ್ನಡ ವೇದಿಕೆ  ಅಧ್ಯಕ್ಷ ಎಂಪಿಎಂ ಷಣ್ಮುಖಯ್ಯ,   ವೇದಿಕೆಯು ತಾಲೂಕಿನಾದ್ಯಂತ ಗ್ರಾಮ ಪಂಚಾಯ್ತಿ ಮಟ್ಟದ ಶಾಲಾ ಕಾಲೇಜುಗಳಲ್ಲಿ  ಕನ್ನಡ ಭಾಷಾ ಶಿಕ್ಷಕರು, ಉಪನ್ಯಾಸಕರುಗಳನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಕರೆದುಕೊಂಡು ಹೋಗಿ, ಶಾಲಾ-ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಕಲೆ ಕುರಿತಂತೆ ಉಪನ್ಯಾಸ‌ ಮಾಡಿಸುವ ಮೂಲಕ ಸುವರ್ಣ ಸಂಭ್ರಮಾಚರಣೆ ಆಚರಿಸುತಿದ್ದೇವೆ ಎಂದರು

ವಿಶೇಷ ಉಪನ್ಯಾಸ ನೀಡಿದ ರಾಂಪುರ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಪ್ರಕಾಶ್    ಹುಣಸಘಟ್ಟದ ಕರ್ನಾಟಕ ಸಂಭ್ರಮಾಚರಣೆಯ ವೇದಿಕೆ ಡಾ. ರಾಜಕುಮಾರ್ ಅವರ ವೇದಿಕೆಯಾಗಿದ್ದು,  ಈ ಸಂದರ್ಭದಲ್ಲಿ  ರಾಜಕುಮಾರ್ ಅವರನ್ನು ಕುರಿತು ಹೇಳಲೇಬೇಕು  `ಕನ್ನಡ ಅಂದರೆ ಪ್ರಾಣ, ಕನ್ನಡ ಉಸಿರು’ ಎಂದು ಅವರು ಸದಾ ಹೇಳುತ್ತಿದ್ದರು. 

ಕನ್ನಡ ನಾಡಿನ ಎಲ್ಲ ಜನರನ್ನು ಅವರು ನನ್ನ ಅಭಿಮಾನಿ ದೇವರು ಎಂದು ಭಾವಿಸಿದ್ದರು. ಕರ್ನಾಟಕದಲ್ಲಿ ಕನ್ನಡ ಭಾಷೆ ಮೇಲ್ಮಟ್ಟದಲ್ಲಿ ಏರಿಸಲು ರಾಜ್ಯಾದ್ಯಂತ ಅವರು ಗೋಕಾಕ್ ಚಳುವಳಿಯ ನೇತೃತ್ವ ವಹಿಸಿ ಸಂಚರಿಸಿ ಕನ್ನಡ ಡಿಂಡಿಮವನ್ನು ಭಾರಿಸಿದ್ದರು ಎಂದರು

ಗ್ರಾಮ ಪಂಚಾಯತಿ ಸದಸ್ಯ ರೋಷನ್, ಎಸ್‌ಡಿಎಂಸಿ  ಅಧ್ಯಕ್ಷ  ಶಿವಲಿಂಗಪ್ಪ ಮಾತನಾಡಿದರು.  ಕುಮಾರಿ ರೂಪಶ್ರೀ ಸಂಗಡಿಗರಿಂದ ಪ್ರಾರ್ಥನೆ, ಅಭಿವೃದ್ಧಿ ಅಧಿಕಾರಿ   ಪರಮೇಶ್ವರ ಕೊಲ್ಲೂರ  ಸ್ವಾಗತಿಸಿದರು. ಕಾರ್ಯದರ್ಶಿ ನಾಗರಾಜ್ ವಂದಿಸಿದರು.  ಮುಖ್ಯ ಶಿಕ್ಷಕಿ ಶ್ರೀಮತಿ ರೇಣುಕಮ್ಮ   ನಿರೂಪಿಸಿದರು. 

error: Content is protected !!