ಪತ್ರಕರ್ತರು ಜನರ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಲಿ

ಪತ್ರಕರ್ತರು ಜನರ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಲಿ

ಜಗಳೂರಿನ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ

ಜಗಳೂರು, ನ.30- ಪತ್ರಕರ್ತರು ಎಲ್ಲಾ ವರ್ಗದ ಜನರ ಜ್ವಲಂತ ಸಮಸ್ಯೆಗಳಿಗೆ ದ್ವನಿಯಾಗಿ ಕೆಲಸ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಕರೆ ನೀಡಿದರು.

ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ ನೂತನ ಕರ್ನಾಟಕ ಎಸ್ಸಿ-ಎಸ್ಟಿ ಪತ್ರಿಕಾ ವರದಿಗಾರರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ  ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ  ಅವರು ಮಾತನಾಡಿದರು.

ಸಮಾಜದಲ್ಲಿ ಸಂವಿಧಾನದ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್‌ರವರ ವಿಶಿಷ್ಟ ಸಂವಿಧಾನದ ಆಶಯಗಳನ್ನು ನಾವು ತಿಳಿದು ಅನುಸರಿಸದೇ, ನಮಗೆ ನಾವೇ ಶೋಷಣೆ ಮಾಡಿಕೊಳ್ಳುತ್ತಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಎಸ್ಸಿ-ಎಸ್ಟಿ ಶೋಷಿತ ಸಮುದಾಯಗಳಿಗೆ ಶಿಕ್ಷಣದ ಹಕ್ಕು ಸಿಕ್ಕಿದ್ದು, ನಾವುಗಳು ಪರಿಪೂರ್ಣ ಅಭಿವೃದ್ಧಿ ಕಂಡಿಲ್ಲ ಎಂದರು.

ಮೌಢ್ಯ, ಕಂದಾಚಾರ ಸಮಾಜದಲ್ಲಿ ಮನೆ ಮಾಡಿದೆ. ನೂತನ ಎಸ್ಸಿ-ಎಸ್ಟಿ ಕ್ಷೇಮಾಭಿವೃದ್ಧಿ ಸಂಘಟನೆ ಪದಾಧಿಕಾರಿಗಳು ಸಮಾಜ ಪರಿವರ್ತನೆಗೆ ಭದ್ರ ಬುನಾದಿಯಾಗಲಿ, ಎಸ್ಸಿ-ಎಸ್ಟಿ ಪತ್ರಿಕಾ ವರದಿಗಾರರು  ಮುಂದಿನ ದಿನಗಳಲ್ಲಿ ಎಲ್ಲಾ ವರ್ಗದ ಜನರ ನೋವಿಗೆ ಮಿಡಿಯುವ ನಾಡಿಮಿಡಿತವಾಗಿ ಸ್ವಾಸ್ಥ್ಯ ಸಮಾಜ ಕಟ್ಟುವ ನಿಟ್ಟಿನಲ್ಲಿ ಮಾದರಿ ಸಂಘಟನೆಯಾಗಿ ಬೆಳೆಯಲಿ.

 ನಿಮ್ಮ ಮೂಲಭೂತವಾದ ಹಕ್ಕಿಗಾಗಿ ನಿರಂತರ ಹೋರಾಟ ಅನಿವಾರ್ಯ.ನಾವು ಕೂಡ ಸರ್ಕಾರದಲ್ಲಿ ಚರ್ಚೆ ಮಾಡುವುದರ ಜೊತೆಗೆ  ಸಂಬಂಧಿಸಿದ ವಾರ್ತಾ ಇಲಾಖೆ, ಎಸ್ಸಿ-ಎಸ್ಟಿ ಕಲ್ಯಾಣ ಮಂಡಳಿ ಇಲಾಖೆಗಳ ಮೂಲಕ ತಮ್ಮ ಸೌಲಭ್ಯಗಳನ್ನು ಪಡೆಯಲು‌ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸುತ್ತೇವೆ ಎಂದರು.

ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, ಎಸ್ಸಿ-ಎಸ್ಟಿ ಪತ್ರಿಕಾ ವರದಿಗಾರರ ಸಂಘಕ್ಕೆ ನಮ್ಮ ಸಂಪೂರ್ಣ ಸಹಕಾರವಿದ್ದು, ನಿಮ್ಮ ನೈಜ, ನಿರಂತರ ವರದಿಗಾರಿಕೆ ಮೂಲಕ ಸಮಾಜದ ಕಣ್ಣು ತೆರೆಸುವಂತಾಗಲಿ. ಮಾನವ ಬಂಧುತ್ವ ವೇದಿಕೆ ರೂವಾರಿಗಳು, ಸಚಿವರಾದ ಸತೀಶ್ ಜಾರಕಿಹೊಳಿಯವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡ ಸಂಘ, ಮುಗಿಲೆತ್ತರಕ್ಕೆ ಬೆಳೆಯಲಿ ಎಂದು  ಶುಭ ಹಾರೈಸಿದರು.

ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಕೂಡ್ಲಿಗಿ ಶಾಸಕ ಶ್ರೀನಿವಾಸ, ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ಮಾಜಿ ಶಾಸಕ ಹೆಚ್.ಪಿ. ರಾಜೇಶ್, ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್, ಹಿರಿಯ ಪತ್ರಕರ್ತ ಬಸವರಾಜ್ ದೊಡ್ಡಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್,  ಇನ್‌ಸೈಟ್ ಫೌಂಡೇಷನ್ ಜಿ.ಬಿ. ವಿನಯ್ ಕುಮಾರ್, ಕಲ್ಲೇಶ್‌ರಾಜ್ ಪಟೇಲ್, ಹೊದಿಗೆರೆ ರಮೇಶ್, ಎ.ಬಿ. ರಾಮಚಂದ್ರಪ್ಪ, ತಹಶೀಲ್ದಾರ್ ಸೈಯದ್ ಖಲೀಂ ಉಲ್ಲಾ,  ಎಸ್ಸಿ-ಎಸ್ಟಿ ಪತ್ರಕರ್ತರ ಸಂಘದ  ರಾಜ್ಯಾಧ್ಯಕ್ಷ   ಬಸವರಾಜ್ ಮತ್ತು ಪದಾಧಿಕಾರಿಗಳು ಇದ್ದರು.

error: Content is protected !!