ಕನಕದಾಸರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕ

ಕನಕದಾಸರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕ

ಹರಿಹರದ ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ. ಹರೀಶ್

ಹರಿಹರ, ನ.30- ವಿಶ್ವ ಕಂಡ  ಅಪ್ರತಿಮ ದಾರ್ಶನಿಕ,  ತತ್ವಜ್ಞಾನಿ, ಭಕ್ತಿ ಪಂಥದ ಪ್ರಮುಖ ಹರಿದಾಸರಲ್ಲಿ ಒಬ್ಬ ರಾದ ಭಕ್ತ ಕನಕದಾಸರ ಚಿಂತನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಹೋದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯಪಟ್ಟರು.

ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ಕನಕದಾಸರ ಜಯಂತಿ ಸಮಾರಂಭದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. 

ಕಾಲಜ್ಞಾನಿ, ವರ್ಗ ಹೋರಾಟದ ಹರಿಕಾರ ಎನಿಸಿಕೊಂಡ ಕನಕದಾಸರು, ಸಾಹಿತ್ಯದ ಮೂಲಕ ಜನಮಾನಸದಲ್ಲಿ ನೆಲೆಗೊಂಡಿದ್ದಾರೆ. ಅವರು ರಚಿಸಿದ ಮೋಹನ ತರಂಗಿಣಿ ಹರಿಭಕ್ತಸಾರ, ನಳ ಚರಿತ್ರೆ ಸೇರಿದಂತೆ ಅನೇಕ ಕಾವ್ಯಗಳನ್ನು ರಚಿಸಿ, ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿ ಅಜರಾಮರರಾಗಿ ದ್ದಾರೆ. ಸ್ವಜಾತಿ, ಸ್ವಮತ ಮನಸ್ಥಿತಿಯನ್ನು ಬಿಟ್ಟು, ಸಮಾಜದ ಒಳಿತಿಗಾಗಿ ಹೋರಾಟ ಮಾಡಿದ ಕೆಲವೇ ಕೆಲವು ಅಸಾಮಾನ್ಯ ವ್ಯಕ್ತಿಗಳಲ್ಲಿ ಸಂತ ಕನಕದಾಸರು ಒಬ್ಬರಾಗಿ ದ್ದಾರೆ. ತಮ್ಮ ಜೀವನದ ಅನುಭವಗಳ ಮೂಲಕ ಸಾಮಾಜಿಕ, ವೈಚಾರಿಕ, ಅಧ್ಯಾತ್ಮಿಕ, ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಸಮಾಜ ತಿದ್ದುವ ಕೈಂಕರ್ಯವನ್ನು ಕನಕ ದಾಸರು ಮಾಡಿದ್ದಾರೆ. ಜೊತೆಗೆ ಶೋಷಿತರ ನೋವುಗಳನ್ನು ಅರಿತು ಅವುಗಳಿಗೆ ಪರಿಹಾರವನ್ನು ಸೂಚಿಸುವ ಮೂಲಕ ಅವರನ್ನು ಮೇಲೆ ತರುವ ನಿಟ್ಟಿನಲ್ಲಿ ಹೆಜ್ಜೆಗಳನ್ನು ಹಾಕಿದ್ದರು ಎಂದು ಹೇಳಿದರು.

ತಹಶೀಲ್ದಾರ್ ಗುರುಬಸವರಾಜಯ್ಯ ಮಾತನಾಡಿ, ಕನಕದಾಸರು ದೇಶೀಯತೆ ಯನ್ನು ಮೈಗೂಡಿಸಿಕೊಂಡು ಸಾಹಿತ್ಯ ಸರಳತೆಯೊಂದಿಗೆ ಸಮ ಸಮಾಜದ ಬೀಜವನ್ನು ಬಿತ್ತಿದ್ದಾರೆ. ವಾಸ್ತವತೆಯ ಕಠೋರ ಸತ್ಯಗಳನ್ನು ಪರಿಣಾಮಕಾರಿ ಯಾಗಿ ಅನಾವರಣಗೊಳಿಸಿದವರು. ಇಂತಹ ಮಹಾನ್ ಮಾನವತಾವಾದಿಯ ಚಿಂತನೆಗಳನ್ನು ಇಂದಿನ ಯುವಕರು ಮೈಗೂಡಿಸಿಕೊಂಡು ತಮ್ಮ ಬದುಕನ್ನು ಉತ್ತಮ ರೀತಿಯಲ್ಲಿ ಕಟ್ಟಿಕೊಳ್ಳುವಂತೆ ಹೇಳಿದರು.

ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರ್ ಶಶಿಧರಯ್ಯ, ಬಿಇಓ ಹನುಮಂತಪ್ಪ, ಕೃಷಿ ಇಲಾಖೆಯ ನಾರನಗೌಡ, ಬಿಸಿಎಂ ಇಲಾಖೆಯ ಪರ್ವೀನ್ ಬಾನು, ಸಿಡಿಪಿಓ ಇಲಾಖೆ ಪೂರ್ಣಿಮಾ, ತೋಟಗಾರಿಕೆ ಇಲಾಖೆ ಸಿದ್ದೇಶ್, ತಾಪಂ ಪ್ರಭಾರಿ ಇಓ ರಾಮಕೃಷ್ಣಪ್ಪ, ಪರಮೇಶ್ವರಪ್ಪ, ಕರಿಬಸಪ್ಪ ಮಠದ, ಎನ್ ಚಂದ್ರಪ್ಪ, ಬಿ.ಎನ್. ಗೌಡ, ರೇವಣಸಿದ್ದಪ್ಪ, ಹಾಲೇಶಪ್ಪ ಪೂಜಾರ್, ಗೋವಿಂದಪ್ಪ, ಕೆಂಚಪ್ಪ, ಪ್ರಕಾಶ್, ಕೃಷ್ಣಪ್ಪ, ಬೀರಪ್ಪ, ರುದ್ರಪ್ಪ, ಜಿಗಳಿ ಹನುಮಗೌಡ, ಶಿಕ್ಷಕ ಎ. ರಿಯಾಜ್ ಆಹ್ಮದ್, ಶಾಸಕರ ಆಪ್ತ ಸಹಾಯಕ ಶಿವಶಂಕರ್ ಚಿಕ್ಕಬಿದರಿ, ವಿ.ಎ.ಗಳಾದ ಹೇಮಂತ್ ಕುಮಾರ್, ವಿಜಯಕುಮಾರ್ ಮತ್ತು ಇತರರು ಹಾಜರಿದ್ದರು. 

error: Content is protected !!