ಕೊಕ್ಕನೂರು : ಪುಷ್ಪಗಿರಿ ಸ್ವ-ಸಹಾಯ ಸಂಘಗಳ ಸಮಾವೇಶದಲ್ಲಿ ಸೋಮಶೇಖರ ಶ್ರೀ ಆಶಯ
ಮಲೇಬೆನ್ನೂರು, ನ. 28- ಪುಷ್ಪಗಿರಿ ಮಠ ಮತ್ತು ಪುಷ್ಪಗಿರಿ ಗ್ರಾಮಾಭಿವೃದ್ಧಿ ಸಂಸ್ಥೆ ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲಾ ಜಾತಿ, ಧರ್ಮಗಳ ಜನರ ಏಳಿಗೆ ನಮ್ಮ ಆಶಯವಾಗಿದೆ ಎಂದು ಹಳೇಬೀಡು ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಮಂಗಳವಾರ ಕೊಕ್ಕನೂರು ಗ್ರಾಮದ ಶ್ರೀ ಪವನ ದೇವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಪುಷ್ಪಗಿರಿ ಸ್ವ-ಸಹಾಯ ಸಂಘಗಳ ಸಮಾವೇಶ ಮತ್ತು ಗುರುವಂದನಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಹಳೇಬೀಡು ಸುತ್ತಮುತ್ತ ಕೆರೆ-ಕಟ್ಟೆಗಳನ್ನು ಅಭಿವೃದ್ಧಿಪಡಿಸಿ ನೀರು ತುಂಬಿಸಿ, ಎಲ್ಲಾ ವರ್ಗಗಳ ಜನರಿಗೆ ಅನಕೂಲವಾಗುವಂತೆ ಮಾಡಿದ್ದೇವೆ.
ಸಂಘದಿಂದ ಶ್ರೇಷ್ಠತೆ ಸಾಧ್ಯ ಎಂಬ ಉದ್ದೇಶದಿಂದ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸ್ಥಾಪಿಸಿ, ಆ ಮೂಲಕ ಸ್ವ-ಸಹಾಯ ಸಂಘಗಳನ್ನು ರಚಿಸಿದ್ದೇವೆ.ರಾಜ್ಯದ 9 ಜಿಲ್ಲೆಗಳಲ್ಲಿ 1720 ಸಂಘಗಳಲ್ಲಿ 35 ಸಾವಿರಕ್ಕೂ ಹೆಚ್ಚು ಮಹಿಳಾ ಸದಸ್ಯರಿದ್ದಾರೆ.
ನಾವು ನಿಮಗೆ ಬರೀ ಹಣ ಮಾಡುವುದನ್ನು ಹೇಳುವುದಿಲ್ಲ. ಬದಲಿಗೆ ಅಂತರಂಗವನ್ನು ಶುದ್ಧ ಮಾಡಿಕೊಂಡು, ವ್ಯಕ್ತಿತ್ವ ವಿಕಾಸಗೊಳಿಸಿಕೊಳ್ಳುವಂತೆ ಮಾರ್ಗದರ್ಶನ ಮಾಡುತ್ತೇವೆ. ಅದಕ್ಕೆ ಪೂರಕವಾಗಿ ತರಬೇತಿಗಳನ್ನೂ ನೀಡುತ್ತೇವೆ ಎಂದು ತಿಳಿಸಿದರು.
ಭಕ್ತರು ನೀಡಿದ ಜವಾಬ್ದಾರಿಯನ್ನು ಸಾರ್ಥಕಪಡಿಸಿದ ಆತ್ಮ ತೃಪ್ತಿ ನಮಗಿದೆ. ಪುಷ್ಪಗಿರಿ ಸ್ವ-ಸಹಾಯ ಸಂಘಗಳಿಂದ ನೀವು ಪರಮ ಸುಖಿಗಳಾಗಲು ಸಂಕಲ್ಪ ಮಾಡಬೇಕು ಎಂದು ಶ್ರೀಗಳು ಕರೆ ನೀಡಿದರು.
ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಧರ್ಮಸ್ಥಳ ಮತ್ತು ಪುಷ್ಪಗಿರಿ ಯೋಜನೆಗಳ ನೆರವಿನಿಂದ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸುವ ಮೂಲಕ ದೇಶದ ಅಭಿವೃದ್ಧಿಗೆ ಕೈ ಜೋಡಿಸಲಿ ಎಂದು ಆಶಿಸಿದರು.
ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿ, ಮಹಿಳೆಯರು ಪುರುಷರಿಗಿಂತ ಹೆಚ್ಚು ಬುದ್ಧಿ ಶಕ್ತಿ ಹೊಂದಿದ್ದು, ಅವರಿಂದಾಗಿ ಕುಟುಂಬಗಳಲ್ಲಿ ಬದಲಾವಣೆ ಸಾಧ್ಯವಾಗಿದೆ ಅಭಿಪ್ರಾಯಪಟ್ಟರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್ ಮಾತನಾಡಿ, ಭತ್ತ ಬೆಳೆದ ರೈತರಿಗೆ ಈ ವರ್ಷ ಬಂಪರ್ ಬೆಲೆ ಸಿಗುತ್ತಿದ್ದು, ಕ್ವಿಂಟಾಲ್ ಭತ್ತದ ದರ 2900 ರಿಂದ 3 ಸಾವಿರ ರೂ.ಗಳ ಗಡಿದಾಟಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ ಎಂದು ಹೇಳಿದರು.
ನಂದಿ ಸೌಹಾರ್ದ ಸಹಕಾರಿ ಮಾಜಿ ಅಧ್ಯಕ್ಷ ಜಿಗಳಿ ಇಂದೂಧರ್ ಮಾತನಾಡಿ, ಸ್ವಸಹಾಯ ಸಂಘಗಳಿಗೆ ನಮ್ಮ ಸಹಕಾರಿ ಕಡಿಮೆ ಬಡ್ಡಿ ದರದಲ್ಲಿ ಸಾಲ-ಸೌಲಭ್ಯ ನೀಡಲು ತೀರ್ಮಾನಿಸಿದ್ದೇವೆ ಎಂದರು.
ನಿವೃತ್ತ ನ್ಯಾಯಾಧೀಶ ಕೆಂಪಗೌಡ್ರು, ಸ್ವ-ಸಹಾಯ ಸಂಘಗಳ ಪರವಾಗಿ ದಾವಣಗೆರೆಯ ಗೀತಾ, ಗೋವಿನಹಾಳ್ ಶೋಭಾ ಮಾತನಾಡಿದರು.
ಯಲವಟ್ಟಿಯ ಗುರುಸಿದ್ಧಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಹಿರಿಯರಾದ ಎಂ. ಕರಿಬಸಯ್ಯ, ಮೂಗಿನಗೊಂದಿ ಲೋಕೇಶ್ವರಪ್ಪ, ಮಹಾಂತಯ್ಯ, ಮೇಸ್ತ್ರಿ ಬಸವರಾಜಪ್ಪ, ಬಿ. ವೀರಯ್ಯ, ಅಂಗಡಿ ಧರ್ಮಣ್ಣ, ತಾಳ್ಯದ ಮಹಾಲಿಂಗಪ್ಪ, ಕುಕ್ಕುವಾಡ ರುದ್ರಗೌಡ್ರು, ಹಳ್ಳಿಹಾಳ್ ವೀರನಗೌಡ, ನಂದಿ ಸೌಹಾರ್ದ ಸಹಕಾರಿ ಅಧ್ಯಕ್ಷ ಹೆಚ್.ಟಿ. ಶಾಂತನಗೌಡ, ಉಪಾಧ್ಯಕ್ಷ ಜಿಗಳಿ ಎಂ.ವಿ. ನಾಗರಾಜ್, ತಾ. ಗ್ರಾ.ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಜಿಗಳಿ ಆನಂದಪ್ಪ, ಕೆ.ಹೆಚ್.ನಾಗನಗೌಡ, ಬಿ.ಕೆ. ಮಹೇಶ್ವರಪ್ಪ, ಬಿ.ಎಸ್. ಕುಬೇರಸ್ವಾಮಿ, ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಅಭಿ ಪಾಟೀಲ್, ಜಿಗಳಿ ಹನುಮಗೌಡ, ಉಪನ್ಯಾಸಕ ಕೋಣನತಲೆ ರಾಕೇಶ್, ಜಿಗಳೇರ ಹಾಲೇಶಪ್ಪ, ಪುಷ್ಪಗಿರಿ ಸಂಸ್ಥೆಯ ಸಿಇಓ ನಾಗಯ್ಯ, ಜಿಲ್ಲಾ ನಿರ್ದೇಶಕ ಅಡವಿ ಸೇರಿದಂತೆ, ಇತರರು ಭಾಗವಹಿಸಿದ್ದರು.
ಕೊಕ್ಕನೂರಿನ ಮಮತಾ, ಸೌಮ್ಯ ಸ್ವಾಗತಿಸಿದರು. ಶಿಕ್ಷಕ ಎನ್.ಜಿ. ನಾಗರಾಜ್ ನಿರೂಪಿಸಿದರೆ, ಗೋವಿನಹಾಳ್ ಹನುಮಗೌಡ ವಂದಿಸಿದರು.