ಹರಿಹರದ ಎಸ್.ಜೆ.ವಿ.ಪಿ. ಕಾಲೇಜಿನ ಕಾರ್ಯಕ್ರಮದಲ್ಲಿ ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ. ಕೊಟ್ರೇಶ್
ಹರಿಹರ, ನ,24- ಭರತ ಭೂಮಿಯಲ್ಲಿ ಮಾನವನ ಶ್ರೇಯಸ್ಸಿಗಾಗಿ ನಾಡಿನ ಅನೇಕ ಧಾರ್ಮಿಕ ಸಂಸ್ಥೆಗಳು ತಮ್ಮದೇ ಆದ ಕೊಡುಗೆ ನೀಡಿದ್ದು, ಆ ನಿಟ್ಟಿನಲ್ಲಿ ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮನುಕುಲದ ಉದ್ಧಾರ ಬಯಸಿ ವಸುದೈವ ಕುಟುಂಬದ ಪರಿಕಲ್ಪನೆಯ ಪೂರಕ ಕಾರ್ಯಗಳು ಮಾಡಿರುವುದು ಶ್ಲ್ಯಾಘನೀಯ ಎಂದು ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ. ಕೊಟ್ರೇಶ್ ಅಭಿಪ್ರಾಯಪಟ್ಟರು.
ನಗರದ ಎಸ್.ಜೆ.ವಿ.ಪಿ. ಕಾಲೇಜಿನ ಎಂ.ಬಿ. ಗುರುಸಿದ್ದಸ್ವಾಮಿ ಸಭಾಂಗಣದಲ್ಲಿ ಶ್ರೀಶೈಲ ಶಿಕ್ಷಣ ಮಹಾವಿದ್ಯಾಲಯ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಇವರ ಸಹಯೋಗದೊಂದಿಗೆ ನಡೆದ ಶ್ರೀಶೈಲ ಜಗದ್ಗುರು ಗಳವರ 51ನೇ ಜನ್ಮದಿನ ಮತ್ತು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯನಿಗೆ ಸಂಸ್ಕಾರವೆಂಬ ಅರಿವನ್ನು ನೀಡಿ ಅಧ್ಯಾತ್ಮಿಕ ತಳಹದಿಯ ಮೇಲೆ ಜೀವನ ನಡೆಸುವ ಪರಿಧಿ ರೂಪಿಸಿಕೊಳ್ಳಲು ಹಾಗೂ ಉತ್ತಮ ವ್ಯಕ್ತಿತ್ವ ಸಾಧನೆಗೆ ಬೇಕಾದ ಶಿಕ್ಷಣ ವನ್ನು, ಜಾತಿ, ಮತ, ಪಂಥ ಭೇದಗಳಿಲ್ಲದೆ, ಲೋಕಕಲ್ಯಾಣಕ್ಕಾಗಿ ವಿದ್ಯಾಮಂದಿರಗಳನ್ನು ಸ್ಥಾಪಿಸಿ ಶಿಕ್ಷಣವನ್ನು ನೀಡಿದ ಶ್ರೇಯಸ್ಸು ಲಿಂ.ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಮಹಾ ಸ್ವಾಮಿಗಳಿಗೆ ಸಲ್ಲುತ್ತದೆ ಎಂದು ಹೇಳಿದರು.
ಎಸ್.ಜೆ.ವಿ.ಪಿ ಕಾಲೇಜು ಉಪಾಧ್ಯಕ್ಷ ಡಿ.ಎಂ. ಹಾಲಸ್ವಾಮಿ ಮಾತನಾಡಿ, ಲಿಂ. ಜಗ ದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ವಿವಿಧತೆಯಲ್ಲಿ ಏಕತೆ ಸಾರಿದ ಮಹಾತ್ಮರು. ಹರಿಹರದಲ್ಲಿ ಶ್ರೀ ಜಗ ದ್ಗುರು ಪಂಚಾಚಾರ್ಯ ವಿಶ್ವಧರ್ಮ ವಿದ್ಯಾ ಪೀಠ ತೆರಯುವುದರೊಂದಿಗೆ ಸಹಸ್ರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಟ್ಟ ಪರಿಣಾಮ, ಆ ವಿದ್ಯಾರ್ಥಿಗಳು ಉನ್ನತ ಸ್ಥಾನ ಅಲಂಕರಿಸಲು ಅನುಕೂಲವಾಗಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ ಮಾತನಾಡಿ, ಸಾಹಿತ್ಯದ ಆಸಕ್ತಿಯನ್ನು ಬೆಳೆಸಿಕೊಂಡವರು ತಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ನಡೆಸುತ್ತಾರೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಂ. ಚಿದಾನಂದ ಕಂಚಿಕೇರಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಂಯಮ, ಬದ್ದತೆ, ತಾಳ್ಮೆ, ಏಕಾಗ್ರತೆ ಇವು ಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಎಂದು ಕರೆ ನೀಡಿದರು.
ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ, ಎಸ್.ಜೆ.ವಿ.ಪಿ. ಕಾಲೇಜು ಪ್ರಧಾನ ಕಾರ್ಯದರ್ಶಿ ಆರ್.ಟಿ. ಪ್ರಶಾಂತ್, ಹಿರಿಯ ಕ್ರೀಡಾಪಟು ಹೆಚ್.ನಿಜಗುಣ, ಪತ್ರಕರ್ತ ಹೆಚ್.ಸಿ. ಕೀರ್ತಿಕುಮಾರ್ ಮಾತನಾಡಿ
ಈ ವೇಳೆ ಉದ್ಯಮಿ ಸಿ.ಎನ್. ಹುಲುಗೇಶ್, ಬಂಡೇರ್ ತಿಮ್ಮಣ್ಣ ಮಾತನಾಡಿದರು. ಪ್ರಾಂಶುಪಾಲ ಡಾ. ಬಿ. ಆರ್ ಗುರುದೇವ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂಬ ಹಾಡನ್ನು ಹಾಡಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಈಶಪ್ಪ ಬೂದಿಹಾಳ, ಪ್ರಾಂಶುಪಾಲ ಡಾ. ಬಿ.ಆರ್. ಗುರುದೇವ, ಪ್ರಾಂಶುಪಾಲೆರಾದ ಶಿವಗಂಗಮ್ಮ, ಸಹಾಯಕ ಪ್ರಾಧ್ಯಾಪಕರಾದ ಡಾ ಎಂ.ವಿ. ಹರ್ಷಲತಾ, ಉಪನ್ಯಾಸಕರಾದ ರಬಿಯಾ ಬಸ್ರಿ ಇತರರು ಹಾಜರಿದ್ದರು.
ಜಿ.ವಿ. ಸೃಷ್ಟಿ ಪ್ರಾರ್ಥಿಸಿದರು. ಈಶಪ್ಪ ಬೂದಿಹಾಳ ಸ್ವಾಗತಿಸಿದರು. ಆರ್. ದೀಪಾ ನಿರೂಪಿಸಿದರು. ಡಾ ಎಂ.ವಿ. ಹರ್ಷಲತಾ ವಂದಿಸಿದರು.