ಮಲೇಬೆನ್ನೂರು, ನ.24- ಕುಣಿಬೆಳಕೆರೆ ಗ್ರಾಮದ ಆರಾಧ್ಯ ದೈವ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ದೊಡ್ಡಎಡೆ ಜಾತ್ರೆಯು ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ಬೆಳಿಗ್ಗೆ ವಿಶೇಷ ಪೂಜೆ, ಸಾಮೂಹಿಕ ವಿವಾಹ, ಜವಳ ಸೇರಿದಂತೆ ಇನ್ನೂ ಅನೇಕ ಸೇವೆಗಳ ನಡೆದವು. ನಂತರ ಬೀರಪ್ಪನಿಗೆ ಈರಗಾರರಿಂದ ದೊಡ್ಡಎಡೆ ಪೂಜೆ ಶ್ರದ್ಧಾ-ಭಕ್ತಿಯಿಂದ ನೆರವೇರಿಸಿ, ಮಹಾ ಅನ್ನ ಸಂತರ್ಪಣೆಗೆ ಚಾಲನೆ ನೀಡಲಾಯಿತು.
ಈ ಜಾತ್ರೆಯ ವಿಶೇಷ ಏನೆಂದರೆ, ಈ ದಿನ ಊರಿನ ಯಾರ ಮನೆಯಲ್ಲೂ ಅಡುಗೆ ಮಾಡುವುದಿಲ್ಲ. ಎಲ್ಲರೂ ಅನ್ನಸಂತರ್ಪಣೆಯಲ್ಲಿ ಊಟ ಮಾಡುತ್ತಾರೆ. ಅಷ್ಟೇ ಅಲ್ಲ, ಈ ಹಬ್ಬಕ್ಕೆ ಎಲ್ಲಾ ಬಂಧು-ಮಿತ್ರನ್ನು ಮತ್ತು ಹೆಣ್ಣು ಮಕ್ಕಳು – ಅಳಿಯಂದಿರನ್ನು ಆಹ್ವಾನಿಸುವುದು ವಿಶೇಷವಾಗಿದೆ.
ದೇವಸ್ಥಾನವನ್ನು ಅಡಕೆ ಗೊನೆ, ಬಾಳೆ ಗೊನೆ, ತೆಂಗಿನಕಾಯಿ ಗೊನೆಗಳಿಂದ ಅಲಂಕಾರ ಮಾಡಲಾಗಿತ್ತು. ದಾವಣಗೆರೆ, ಶಿವಮೊಗ್ಗ, ಹಾವೇರಿ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.