ಆತ್ಮವಿಶ್ವಾಸದ ಕೊರತೆ ಆತ್ಮಹತ್ಯೆಗೆ ಕಾರಣ

ಆತ್ಮವಿಶ್ವಾಸದ ಕೊರತೆ ಆತ್ಮಹತ್ಯೆಗೆ ಕಾರಣ

ಹರಿಹರದ ಎಸ್‌ಜೆವಿಪಿ ಕಾಲೇಜು ಕಾರ್ಯಕ್ರಮದಲ್ಲಿ ಪದ್ಮಶ್ರೀ ಜೋಗತಿ ಬಿ.ಮಂಜಮ್ಮ 

ಹರಿಹರ, ನ.22- ಆತ್ಮವಿಶ್ವಾಸದ ಕೊರತೆಯೇ  ಆತ್ಮಹತ್ಯೆಗೆ ಕಾರಣವಾಗಿದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಎಂತಹದೇ ಕಠಿಣವಾದ ಪರಿಸ್ಥಿತಿ ಎದುರಾದರೂ ಧೈರ್ಯದಿಂದ ಮುನ್ನುಗ್ಗಿ, ಗುರಿ ಮುಟ್ಟಿ, ಯಶಸ್ಸು ಗಳಿಸುವಂತೆ  ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗು ಕರ್ನಾಟಕ ಜಾನಪದ ಅಕಾಡೆಮಿ ನಿಕಟ ಪೂರ್ವ ಅಧ್ಯಕ್ಷರಾದ  ಜೋಗತಿ ಮಂಜಮ್ಮ ಕರೆ ನೀಡಿದರು.

ನಗರದ ಎಸ್.ಜೆ.ವಿ.ಪಿ ಕಾಲೇಜು ಮತ್ತು ಸ್ಫೂರ್ತಿ ಪ್ರಕಾಶನ ಸಂಸ್ಥೆಯ ಸಹಯೋಗ ದೊಂದಿಗೆ  ಶ್ರೀಶೈಲ ಜಗದ್ಗುರುಗಳವರ 51ನೇ ಜನ್ಮದಿನ ಮತ್ತು ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನಡೆದ ಮಹಿಳಾ ಗೋಷ್ಠಿಯಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಅವರು ಮಾತನಾಡಿದರು

ಇತ್ತೀಚಿನ ದಿನಗಳಲ್ಲಿ  ಕೆಲವು ವಿದ್ಯಾರ್ಥಿಗಳು ಸಣ್ಣ ಸಣ್ಣ ವಿಚಾರಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಕಳವಳಕಾರಿಯಾಗಿದ್ದು, ಇದಕ್ಕೆಲ್ಲ ಕಾರಣ ಆತ್ಮವಿಶ್ವಾಸದ ಕೊರತೆ ಎಂದು ತಿಳಿಸಿದರು. ನಾನು ಜೀವನದಲ್ಲಿ ಅನೇಕ ಬಾರಿ ಅಪಮಾನ, ನಿಂದನೆಗಳನ್ನು ಅನುಭವಿಸಿದ್ದೇನೆ. ಅಂದು ನಾನು ಅವುಗಳನ್ನು ಸಹಿಸಿಕೊಳ್ಳದೇ ಒಂದು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚನೆ ಮಾಡಿದ್ದುಂಟು ಆದರೆ ನನ್ನ ಸುಪ್ತ ಮನಸ್ಸಿನಲ್ಲಿ ಇದ್ದ ಧೈರ್ಯ ಮತ್ತು ಆತ್ಮ ವಿಶ್ವಾಸದ ಫಲವಾಗಿ ಇಂದು ಬದುಕಿ ಬಾಳಿ ದೇಶದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದೇನೆ ಎಂದು ಭಾವುಕವಾಗಿ ನುಡಿದರು. 

ಇಂದಿನ ಯುವ ಜನತೆ ಸಂಸ್ಕಾರದ  ಜೀವನವನ್ನು ನಡಸಬೇಕು. ತಂದೆ-ತಾಯಿ ಮತ್ತು ಗುರುವಿಗೆ ಸದಾಕಾಲವೂ ಚಿರರುಣಿಯಾಗಿರಬೇಕು ಎಂದು ತಿಳಿಸಿ ಮಾನವೀಯತೆ ಮತ್ತು ಸಮಾನತೆಯನ್ನು ಪ್ರೋತ್ಸಾಹಿಸಬೇಕೆಂದು ಕರೆ ನೀಡಿದರು. 

ಕಾರ್ಯಕ್ರಮವನ್ನು  ಉದ್ಘಾಟಿಸಿದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧಿಕಾರಿ ಗಣಪತಿ ಮಾಳಂಜಿ ಮಾತನಾಡಿ, ಹೆಣ್ಣು ಸಂಸಾರದ ಕಣ್ಣು ಎನ್ನುವಂತೆ ಸಮಾಜದಲ್ಲಿ ಇಂದು ಎಲ್ಲಾ ರಂಗಗಳಲ್ಲಿ ಪುರುಷರಿಗೆ ಸಮಾನವಾಗಿ ಬೆಳೆಯುತ್ತಿರುವುದು ಸಂತೋಷದ ಸಂಗತಿ ಎಂದು ತಿಳಿಸಿದರು.

ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಆರ್.ಟಿ ಪ್ರಶಾಂತ್ ದುಗ್ಗತ್ತಿಮಠ್, ನಗರಸಭೆ ಸದಸ್ಯರಾದ ಶ್ರೀಮತಿ ಅಶ್ವಿನಿ ಕೃಷ್ಣ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾಧಿಕಾರಿ  ಶ್ರೀಮತಿ ಗಾಯತ್ರಿ, ಸ್ಪೂರ್ತಿ ಪ್ರಕಾಶನದ ಅಧ್ಯಕ್ಷ  ಬಸವರಾಜ್.ಎಂ,   ತೆಲಗಿ ವೀರಭದ್ರಪ್ಪ, ಮಲ್ಲಮ್ಮ ನಾಗರಾಜ್, ಶಾರದಮ್ಮ, ಗುರುದೇವ್, ವೀರಣ್ಣ ಶೆಟ್ಟರ್ ಮತ್ತು ಇತರರು ಭಾಗವಹಿಸಿದ್ದರು.

ಪ್ರಾಚಾರ್ಯರಾದ  ಡಾ.ಶಿವಗಂಗಮ್ಮ  ಪ್ರಾಸ್ತಾವಿಕ ವಾಗಿ ಮಾತನಾಡಿದರು. ಶ್ರೀಮತಿ ರಶ್ಮಿ ಸ್ವಾಗತಿಸಿದರು. ವಿಶಾಲ್ ಬೆಂಚಳ್ಳಿ ವಂದಿಸಿದರು. ಕು. ನಳಿನಿ  ಕಾರ್ಯಕ್ರಮದ ನಿರೂಪಣೆ ಮಾಡಿದರು.

error: Content is protected !!