ಸಾಲಕಟ್ಟೆ ಗ್ರಾಮದಲ್ಲಿ ಲಿಂಗದಹಳ್ಳಿ ವೀರಭದ್ರ ಶ್ರೀಗಳ ಅಭಿಪ್ರಾಯ
ಹರಿಹರ, ನ.22- ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಬೆಳೆಯಬೇಕೆಂದರೆ ಉತ್ತಮ ಸಾಮಾ ಜಿಕ, ಕೌಟುಂಬಿಕ ಜೀವನದ ಜೊತೆಗೆ, ಉತ್ಕೃಷ್ಟ ಧಾರ್ಮಿಕ ಮೌಲ್ಯಗಳನ್ನು ಅನುಸರಿಸಬೇಕು ಎಂದು ಲಿಂಗದಹಳ್ಳಿ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಅಭಿಪ್ರಾಯ ಪಟ್ಟರು.
ಅವರಿಂದು ತಾಲ್ಲೂಕಿನ ಸಾಲಕಟ್ಟೆ ಗ್ರಾಮದ ಶ್ರೀ ಈಶ್ವರ ಮತ್ತು ಶ್ರೀ ಕರಿಯಮ್ಮದೇವಿ ದೇವಸ್ಥಾನಗಳ ಕಳಸಾರೋಹಣ ನೆರವೇರಿಸಿ, ಜನ ಜಾಗೃತಿ ಧರ್ಮ ಸಮಾರಂಭವನ್ನು ಉದ್ದೇಶಿಸಿ ಆಶೀರ್ವಚನ ನೀಡುತ್ತಿದ್ದರು.
ಧರ್ಮ ಒಂದು ಕಿಟಕಿ ಇದ್ದಂತೆ. ಕಿಟಕಿ ತೆರೆದರೆ ತಂಪಾದ ಗಾಳಿ ಬೆಳಕು ಎಲ್ಲಡೆ ಆವರಿಸುತ್ತದೆ. ಇಲ್ಲದಿದ್ದರೆ ಕತ್ತಲು ಆವರಿಸುತ್ತದೆ. ದೇವಾಲಯಗಳು ಸಂಸ್ಕೃತಿಯ ಕೇಂದ್ರಗಳಾಗಿದ್ದು, ಭಾರತೀಯರು ದೇಹಕ್ಕಿಂತ ದೇವಾಲಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟವರಾಗಿದ್ದಾರೆ. ದೇವರಲ್ಲಿರುವ ತಾಳ್ಮೆ, ಸಹನಾ ಗುಣ ಮನುಷ್ಯರಲ್ಲಿ ಬೆಳೆಯಬೇಕಾಗಿದೆ. ಆಗ ಮಾತ್ರ ಸಂಸ್ಕಾರಯುತ, ಸುಸಜ್ಜಿತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಭಗವಂತನನ್ನು ಅರಿತಾಗ ಮಾತ್ರ ಅರಿವಿನ ಜ್ಞಾನ ಉಂಟಾಗುತ್ತದೆ. ನಿತ್ಯ ದೇವರ ಸ್ಮರಣೆಯಿಂದ ಮಾತ್ರ ಅರಿವಿನ ಜ್ಞಾನ ತೆರೆದುಕೊಳ್ಳುತ್ತದೆ ಎಂದು ತಿಳಿಸಿದರು.
ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಮಾತನಾಡಿ, ಮಕ್ಕಳ ಭವಿಷ್ಯ ಪೋಷಕರ ಕೈಯಲ್ಲಿದ್ದು, ಅವರನ್ನು ಜಾಗರೂಕತೆಯಿಂದ ಲಾಲನೆ, ಪಾಲನೆ, ಪೋಷಣೆ ಮಾಡಬೇಕಿದೆ. ಮೊಬೈಲ್, ಕಂಪ್ಯೂಟರ್‌ಗಳಿಂದಾಗಿ ಜನರು ಸಂಸ್ಕಾರ, ಸಂಸ್ಕೃತಿಗಳನ್ನು ಮರೆಯುತ್ತಿದ್ದಾರೆ. ಇಂದಿನ ಮಕ್ಕಳಿಗೆ ಸಂಸ್ಕಾರದ ಬಗ್ಗೆ ಪಾಠ ಮಾಡಬೇಕಾಗಿದೆ. ಗುರು – ಹಿರಿಯರ ಬಗ್ಗೆ ಗೌರವ ಕಡಿಮೆಯಾಗುತ್ತಿದೆ. ಆಧುನಿಕ ಯುಗದಲ್ಲಿ ನಮ್ಮ ಧರ್ಮ, ಸಂಸ್ಕಾರಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕಿದೆ. ಪೋಷಕರು ತಮ್ಮ ಮಕ್ಕಳಿಗೆ ಈ ಬಗ್ಗೆ ತಿಳಿ ಹೇಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿ ಮಾಜಿ ಶಾಸಕ ಎಸ್.ರಾಮಪ್ಪ, ಬಿಜೆಪಿ ಯುವ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿದರು.
ಧರ್ಮಸ್ಥಳ ಯೋಜನಾಧಿ ಕಾರಿ ವಸಂತ ದೇವಾಡಿಗ, ವಲಯ ಯೋಜನಾಧಿಕಾರಿ ಮಾರುತಿ, ಗ್ರಾಮದ ಪ್ರಮುಖ ರಾದ ಡಿ.ಎಂ.ಹಾಲಸ್ವಾಮಿ, ಕೆ.ಯೋಗಪ್ಪ, ಪಟೇಲ್ ವೇದಮೂರ್ತಪ್ಪ, ಟಿ.ಹುಚ್ಚೆಂಗೆಪ್ಪ, ಎಸ್.ಜಿ.ರಾಜಶೇಖರಪ್ಪ, ಜಿ.ಎಲ್.ರಾಜಶೇಖರಪ್ಪ, ಎಂ.ಗುರುನಾಥ್, ಬಣಕಾರ್ ವೀರೇಶಪ್ಪ, ಬಿ.ರೇವಣಸಿದ್ದಪ್ಪ, ಎಂ.ಜಿ.ರಾಜಶೇಖರಪ್ಪ, ಆಂಧ್ರದ ರಾಜಪ್ಪ, ನಿವೃತ್ತ ಶಿಕ್ಷಕರಾದ ಎಂ.ಜಿ.ಚಿಕ್ಕಪ್ಪ, ದೇವರಬೆಳಕೆರೆ ರುದ್ರಪ್ಪ, ದೇವಸ್ಥಾನ ಸಮಿತಿಯ ಎಸ್.ಜಿ.ಪ್ರಭುಗೌಡ, ಎಂ.ನಿಜಗುಣ, ಎಸ್.ಜಿ.ಮಂಜುನಾಥ, ಎಸ್.ಪಿ.ಕುಬೇಂದ್ರಪ್ಪ, ಟಿ.ಎಸ್.ಹನುಮಂತಪ್ಪ ಇತರರು ಉಪಸ್ಥಿತರಿದ್ದರು.
ವನಜಾ ಮತ್ತು ಸಂಗಡಿಗರು ಪ್ರಾರ್ಥಿಸಿದರೆ, ಶಿಕ್ಷಕರಾದ ಡಿ.ಎಂ.ಮಂಜುನಾಥಯ್ಯ ಸ್ವಾಗತಿಸಿ, ಆರ್.ಬಿ.ಮಲ್ಲಿಕಾರ್ಜುನ ವಂದಿಸಿದರು. ಕಾರ್ಯಕ್ರಮವನ್ನು ಶಿಕ್ಷಕರಾದ ಕೆ.ಆರ್.ಮಂಜುನಾಥ ನಿರೂಪಿಸಿದರು.