ಸಹಕಾರಿ ಕ್ಷೇತ್ರದಿಂದ ರೈತರಿಗೆ ಅನುಕೂಲ: ಶಾಂತನಗೌಡ

ಸಹಕಾರಿ ಕ್ಷೇತ್ರದಿಂದ ರೈತರಿಗೆ ಅನುಕೂಲ: ಶಾಂತನಗೌಡ

ಹೊನ್ನಾಳಿಯಲ್ಲಿ ಸಹಕಾರ ಸಪ್ತಾಹ

ಹೊನ್ನಾಳಿ,ನ.22- ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಸಹಕಾರಿ ಕ್ಷೇತ್ರ ಎಲ್ಲಾ ರಂಗಗಳಲ್ಲಿ ತನ್ನದೇ ಆದ ಸಹಕಾರಿ ಸೇವೆ ನೀಡುತ್ತಾ ಬಂದಿದ್ದು, ಪ್ರಕೃತಿ ವಿಕೋಪಗಳಂತಹ ಸಂದರ್ಭದಲ್ಲಿ ವಿಶೇಷವಾಗಿ ಸಹಕಾರಿ ಕ್ಷೇತ್ರ ರೈತರ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಶಾಸಕ ಡಿ.ಜಿ.ಶಾಂತನಕಗೌಡ ಹೇಳಿದರು. 

ಹೊನ್ನಾಳಿ ತಾಲ್ಲೂಕಿನ ಗೊಲ್ಲರಹಳ್ಳಿಯ ತರಳಬಾಳು ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಸಹಕಾರ ಇಲಾಖೆ (ದಾವಣಗೆರೆ), ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಶಿವಮೊಗ್ಗ ಜಿಲ್ಲಾ ಹಾಲು ಒಕ್ಕೂಟ, ಅವಳಿ ತಾಲ್ಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳು ತಾಲ್ಲೂಕಿನ ಇತರೆ ಸಂಘಗಳ ಸಹಯೋಗದಲ್ಲಿ ಮೊನ್ನೆ ಆಯೋಜಿಸಲಾಗಿದ್ದ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಹಕಾರ ಸಚಿವರು ಸಾಲಮನ್ನಾ ಹಾಗೂ ಸಹಕಾರಿ ಸಂಘಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚಿಸಲು ವಿಶೇಷ ಸಭೆ ಕರೆಯುವುದಾಗಿ ಹೇಳಿದ್ದಾರೆ ಎಂದು ಅವರು ತಿಳಿಸಿದರು.

ಒಂದು ವೇಳೆ ಸರ್ಕಾರ ಸಾಲ ಮನ್ನಾ ಮಾಡಲು ಮುಂದಾದರೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕಿನ ರೈತರ ಅಂದಾಜು ಎರಡೂವರೆ ಕೋಟಿ ರು. ಸಾಲ ಮನ್ನಾ ಸೌಲಭ್ಯ ರೈತರಿಗೆ ಸಿಗಲಿದೆ ಎಂದರು.

ನಮ್ಮ ಸರ್ಕಾರ 3 ಲಕ್ಷ ರೂ. ಬಡ್ಡಿ ರಹಿತ ಸಾಲವನ್ನು ನೀಡುತ್ತಿದ್ದು, ಇದೀಗ ಇದನ್ನು 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಕುರಿತಂತೆ ಅಧಿವೇಶನದಲ್ಲಿ ಮುಖ್ಯಮಂತ್ರಿಯವರು ಸಹಕಾರಿ ಸಚಿವರೊಂದಿಗೆ ಚರ್ಚಿಸಿದ್ದರೂ ಕೂಡ ರೈತರ ಸಾಲ ಮನ್ನಾ ಮಾಡುವ ವಿಚಾರದಲ್ಲಿ ಸಹಕಾರಿ ಸಚಿವರು ಮತ್ತು ಮುಖ್ಯಮಂತ್ರಿಯವರಿಗೆ ಒತ್ತಾಯ ಮಾಡುವುದಾಗಿ ಭರವಸೆ ನೀಡಿದದರು. 

ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಪ್ರಸ್ತುತ ಸಹಕಾರಿ ಕ್ಷೇತ್ರ ದೇಶದ ಉದ್ದಗಲಕ್ಕೂ ಹೆಮ್ಮರವಾಗಿ ಬೆಳೆದು ನಿಂತಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ಪಾರದರ್ಶಕ ಮತ್ತು ಪ್ರಾಮಾಣಿಕ ಸೇವೆ ಬಹು ಮುಖ್ಯವಾಗಿದ್ದು, ಸಾಲ ಪಡೆಯುವುದು ಎಷ್ಟು ಮುಖ್ಯವೋ ಮರುಪಾವತಿ ಕೂಡ ಅಷ್ಟೇ ಮುಖ್ಯವಾಗುತ್ತದೆ ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕ ಹನುಮನಹಳ್ಳಿ ಬಿ.ಜಿ.ಬಸವರಾಜಪ್ಪ ಮಾತನಾಡಿ, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗಗಳ ವ್ಯಾಪ್ತಿಯನ್ನು ಹೊಂದಿರುವ ಹಾಲು ಉತ್ಪಾದಕರ ಒಕ್ಕೂಟ ಪ್ರಕೃತಿ ವಿಕೋಪಗಳಂತಹ ಸಂದರ್ಭದಲ್ಲಿ ರೈತರಿಗೆ ನೆರವಿನ ರೂಪದಲ್ಲಿ ಹಾಲು ಒಕ್ಕೂಟ ಮಹತ್ವದ ಪಾತ್ರ ವಹಿಸುತ್ತಿದೆ. ಮೂರು ಜಿಲ್ಲೆಗಳಲ್ಲಿಯೇ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳು ಅತೀ ಹೆಚ್ಚು ಹಾಲು ಉತ್ಪಾದಿಸುವ ಮೂಲಕ ಮುಂಚೂಣೆಯಲ್ಲಿದೆ ಎಂದು ಹೇಳಿದರು.

ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮಾತನಾಡಿ, ದೇಶದ ಸುಮಾರು 6 ಸಾವಿರ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ 2513 ಕೋಟಿ ಹಣ ಕಾಯ್ದಿರಿಸಿದೆ ಎಂದು ಹೇಳಿದರು. 

ಮಾಜಿ ಶಾಸಕ ಡಾ. ಡಿ.ಬಿ.ಗಂಗಪ್ಪ, ಡಿ.ಸಿ.ಸಿ. ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್.ಷಣ್ಮುಖಪ್ಪ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಜಗದೀಶ್ ಬಣಕಾರ್,  ಕೆ.ಎಚ್.ಬಸಪ್ಪ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಟಿ.ಜಿ.ರಮೇಶ್ ಗೌಡ, ಶಿವಬ್ಯಾಂಕ್ನ ಚಂದ್ರೇಗೌಡ, ಎಚ್.ಎ.. ಗದ್ದಿಗೇಶ್ ಕೆ.ಎಸ್. ಸೋಮಶೇಖರ್, ವರದರಾಜಪ್ಪಗೌಡ, ರಮೇಶ್ ಸೇರಿದಂತೆ ಅನೇಕ ಸಹಕಾರಿ ಧುರೀಣರು ಭಾಗವಹಿಸಿದ್ದರು.

error: Content is protected !!