ಜಗಳೂರು ತಾ.ನಲ್ಲಿ ಬೆಳೆ ಹಾನಿ ಪರಿಶೀಲಿಸಿದ ಕೃಷಿ ಸಚಿವ

ಜಗಳೂರು ತಾ.ನಲ್ಲಿ ಬೆಳೆ ಹಾನಿ ಪರಿಶೀಲಿಸಿದ ಕೃಷಿ ಸಚಿವ

ಜಗಳೂರು, ನ. 22- ರಾಜ್ಯ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಬುಧವಾರ ಜಿಲ್ಲೆಯ ಜಗಳೂರು ತಾಲ್ಲೂಕಿನ ವಿವಿಧೆಡೆ ರೈತರ ಜಮೀನುಗಳಿಗೆ ಭೇಟಿ ನೀಡಿ, ಮಳೆ ಇಲ್ಲದೆ ಅನಾವೃಷ್ಟಿಯಿಂದ ಹಾಳಾಗಿರುವ ಬೆಳೆ ಹಾನಿ ಪರಿಶೀಲಿಸಿದರು.

ಜಗಳೂರು ತಾಲ್ಲೂಕಿನ ಬಿಳಿಚೋಡು ಹಾಗೂ ದಾವಣಗೆರೆ ತಾ. ಕಂದನಕೋವಿ ಗ್ರಾಮದ ರೈತರ ಮೆಕ್ಕೆಜೋಳ ಬೆಳೆ ವೀಕ್ಷಣೆ ಮಾಡಿ, ಬೆಳೆ ಹಾನಿ ಕುರಿತು ಅಧಿಕಾರಿಗಳು ಹಾಗೂ ರೈತರಿಂದ ಮಾಹಿತಿ ಪಡೆದುಕೊಂಡರು. 

ಜಗಳೂರು ತಾಲ್ಲೂಕಿನಲ್ಲಿ ಹೆಚ್ಚಾಗಿ ಮೆಕ್ಕೆಜೋಳ ಬೆಳೆಯಲಾಗುತ್ತಿದ್ದು, ಮುಂ ಗಾರು ಮಳೆ ಕೊರತೆಯಿಂದಾಗಿ ಮೆಕ್ಕೆಜೋಳ ಬೆಳೆ ಸಂಪೂರ್ಣ ಹಾಳಾಗಿದೆ. ಜಾನುವಾರು ಗಳಿಗೂ ಸಹ ಮೇವು ಸಿಗುತ್ತಿಲ್ಲ ಎಂದು ರೈತರು ಈ ವೇಳೆ ಅಳಲು ತೋಡಿಕೊಂಡರು.

ವಿಮಾ ಕಂಪನಿಗಳು ರೈತರಿಗೆ ಬೆಳೆವಿಮೆ ಪರಿಹಾರ ನೀಡದೇ ಮೋಸ ಮಾಡುತ್ತಿದ್ದಾರೆ. ಈ ಕುರಿತು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಕೃಷಿ ಸಚಿವರಿಗೆ ಬಿಳಿಚೋಡು ಗ್ರಾಮದ  ರೈತರು ಮನವಿ ಮಾಡಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವರು, ಬೆಳೆ ವಿಮೆ ಪರಿಹಾರಕ್ಕೆ ಸಂಬಂಧಪಟ್ಟಂತೆ ಕಳೆದ ವರ್ಷ ಸಾಕಷ್ಟು ದೂರುಗಳು ಸಮಸ್ಯೆಗಳಿವೆ. ಆದರೆ ಈ ವರ್ಷದಿಂದ ಬೆಳೆ ಪರಿಹಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಈ ಕುರಿತು ಈಗಾಗಲೇ ಸಭೆ ನಡೆಸಲಾಗಿದ್ದು, ರೈತರಿಗೆ ತೊಂದರೆಯಾಗದಂತೆ ಬೆಳೆ ವಿಮೆ ಪರಿಹಾರಕ್ಕೆ ಕ್ರಮವಹಿಸಲಾಗಿದೆ ಎಂದು ಹೇಳಿದ ಅವರು, ಫ್ರೂಟ್ಸ್  ಐಡಿಯಲ್ಲಿ ರೈತರು ತಮ್ಮ ಹೆಸರಿನಲ್ಲಿರುವ ಎಲ್ಲ ಜಮೀ ನನ್ನು ನೋಂದಣಿ ಮಾಡಿಸಬೇಕು.ಇದರಿಂದ ಬರ ಪರಿಹಾರಕ್ಕೆ ಅನುಕೂಲವಾಗಲಿದೆ ಎಂದು ರೈತರಿಗೆ ಮನವಿ ಮಾಡಿದರು. 

ಈ ಸಂದರ್ಭದಲ್ಲಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಚನ್ನಗಿರಿ ಶಾಸಕರಾದ ಬಸವರಾಜ್ ವಿ.ಶಿವಗಂಗಾ, ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಕೃಷಿ ಇಲಾಖೆ ಅಧಿಕಾರಿಗಳು ರೈತರು ಇದ್ದರು.

error: Content is protected !!