ಜನ ಸೇವೆ ಮಾಡುವುದು ದೇವರ ಸೇವೆ ಮಾಡಿದಷ್ಟೇ ಪುಣ್ಯದ ಕೆಲಸ

ಜನ ಸೇವೆ ಮಾಡುವುದು ದೇವರ ಸೇವೆ ಮಾಡಿದಷ್ಟೇ ಪುಣ್ಯದ ಕೆಲಸ

ದಾವಣಗೆರೆ, ನ.22- ಸಮಾಜದಲ್ಲಿ ಬಡವರು, ದೀನ ದಲಿತರು, ಶೋಷಿತರು, ಅನಾಥರು, ವಯೋವೃದ್ಧರೂ ಸೇರಿದಂತೆ ಜನ ಸೇವೆಯನ್ನು ಮಾಡುವುದು ಸಾಕ್ಷಾತ್‌ ದೇವರ ಸೇವೆ ಮಾಡಿದಷ್ಟು ಪುಣ್ಯದ ಕೆಲಸ ಎಂದು   ಶಿವಕುಮಾರ್‌ ಒಡೆಯರ್‌ ಅಭಿಮತ ವ್ಯಕ್ತಪಡಿಸಿದರು.

ಸಮೀಪದ ತುರ್ಚಘಟ್ಟ ಬಳಿ ಇರುವ ಸಾಧನ ವೃದ್ಧಾಶ್ರಮ ಮತ್ತು ಅನಾಥಾಶ್ರಮದಲ್ಲಿ ಸೋಮವಾರ ಸಂಜೆ ತಮ್ಮ ತಂದೆ ಚನ್ನಯ್ಯ ಒಡೆಯರ್‌ರವರ 16 ನೇ ವರ್ಷದ ಪುಣ್ಯತಿಥಿ ಅಂಗವಾಗಿ ಏರ್ಪಡಿಸಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮನುಷ್ಯ ಹುಟ್ಟಿದ ಮೇಲೆ ಸಂಸ್ಕಾರ ಮತ್ತು ಸನ್ನಡತೆಯಿಂದ ಜೀವಿಸಬೇಕು. ಇಂದಿನ ಮಕ್ಕಳು ಆರ್ಥಿಕವಾಗಿ ಉತ್ತಮರಾಗಿದ್ದರೂ, ತಂದೆ-ತಾಯಿಯರನ್ನು ಸಾಕಲು ಹಿಂಜರಿಯುತ್ತಾರೆ ಮತ್ತು ಮನೆಗಳಿಂದ ಹೊರನೂಕುತ್ತಾರೆ. ಇಂದು ತಮ್ಮ ತಂದೆ-ತಾಯಿ ಮಕ್ಕಳನ್ನು ಸಾಕಿ, ಸಲಹಿ, ವಿದ್ಯಾ-ಬುದ್ಧಿ ನೀಡಿದಂತಹ ದೇವರು. ತಾಯಿ-ತಂದೆಯರನ್ನು ತಿರಸ್ಕಾರದಿಂದ ಕಾಣುವುದು ಅತ್ಯಂತ ದುರಂತ ಸನ್ನಿವೇಶ ಎಂದರು.

ಆಶ್ರಮದ ಸಂಸ್ಥಾಪಕರಾದ ಶ್ರೀಮತಿ ಪುಷ್ಪಲತಾ ಮಾತನಾಡಿ, ಸಾಧನ ಆಶ್ರಮ ಪ್ರಾರಂಭ ಮಾಡಿ ಎಂಟು ವರ್ಷ ಕಳೆದಿವೆ. ಸುಮಾರು ಜನ ಅನಾಥರು, ವಯೋವೃದ್ಧರು, ಅನಾರೋಗ್ಯ ಪೀಡಿತರನ್ನು ನಮ್ಮ ಆಶ್ರಮದಲ್ಲಿ ನೋಡಿಕೊಂಡಿದ್ದೇವೆ ಮತ್ತು ಮರಣ ಹೊಂದಿದಲ್ಲಿ ಸಂಸ್ಕಾರ ಮಾಡಿದ್ದೇವೆ. ಪ್ರಸ್ತುತ 65 ಜನರು ಆಶ್ರಮ ದಲ್ಲಿದ್ದಾರೆ. ಸರ್ಕಾರದಿಂದ ಯಾವುದೇ ಅನುದಾನ ಪಡೆದಿಲ್ಲ ಮತ್ತು ಯಾವ ಅಧಿಕಾರಿಗಳು, ರಾಜಕಾರ ಣಿಗಳೂ ನಮಗೆ ನೆರವಿನ ಹಸ್ತ ಚಾಚಿಲ್ಲ. ದಾನಿಗಳಿಂದ ಮತ್ತು ನಮ್ಮ ಪ್ರಯತ್ನ ನಡೆಸುತ್ತಿದ್ದೇನೆ ಎಂದರು.

ಇದೇ ವೇಳೆ ಚಿತ್ರದುರ್ಗ ಖಾದಿ ಗ್ರಾಮೋದ್ಯೋಗ ಮಂಡಳಿ ಸದಸ್ಯ ಮಹಾಸ್ವಾಮಿ, ಸಿದ್ದಯ್ಯ ಒಡೆಯರ್‌, ವಕೀಲ ಚಂದ್ರಶೇಖರ್‌ ಒಡೆಯರ್‌, ಯುವ ಕಾಂಗ್ರೆಸ್ ಮುಖಂಡ ಸಂತೋಷ್‌, ನಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!