ಕಾನೂನು ನೆರವು ಕಾರ್ಯಕ್ರಮ ಉದ್ಘಾಟಿಸಿದ ನ್ಯಾ. ಮಹಾವೀರ ಎಂ.ಕರೆಣ್ಣವರ್
ದಾವಣಗೆರೆ, ನ. 16 – ನಮ್ಮ ಕಾನೂನುಗಳ ಮೂಲವೇ ನಮ್ಮ ಪುರಾತನ ಪುರಾಣ, ಪುಣ್ಯ ಕಥೆಗಳು. ಜೊತೆಗೆ ನಮ್ಮ ಹಿರಿಯರು ಹಾಕಿಕೊಟ್ಟ ಕಟ್ಟುಪಾಡುಗಳೇ ಇಂದು ಕಾನೂನುಗಳಾಗಿ ಮಾರ್ಪಟ್ಟಿವೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಎಂ.ಕರೆಣ್ಣವರ್ ಹೇಳಿದರು.
ನಗರದ ರೋಟರಿ ಬಾಲ ಭವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಪ್ರತಿಷ್ಠಾನ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಸೇವಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾನೂನು ನೆರವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಬಾಲ್ಯ ವಿವಾಹ, ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಸೇರಿದಂತೆ ಇನ್ನೂ ಹಲವಾರು ಪಿಡುಗುಗಳು ಇನ್ನೂ ನಮ್ಮ ಸಮಾಜದಲ್ಲಿ ಬೇರೂರಿವೆ. ಇಂಥವು ಗಳನ್ನು ತೊಡೆದು ಹಾಕಬೇಕಾಗಿದೆ. ಸಮಾಜಕ್ಕೆ ಕಂಟಕವಾಗಿರುವ ಇಂತಹ ಸಾಮಾಜಿಕ ಪಿಡುಗುಗಳನ್ನು ನಿವಾರಿಸ ಲೆಂದು ತಜ್ಞರ ಅಭಿಪ್ರಾಯಗಳನ್ನು ಪಡೆದು ಕಾನೂನುಗಳನ್ನು ರೂಪಿಸಲಾಗು ತ್ತದೆ. ಕಾನೂನುಗಳನ್ನ ಬೇಕಾಬಿಟ್ಟಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಅದರಲ್ಲೂ ಇಂದಿನ ನಮ್ಮ ಪೂರ್ಣ ಕಥೆಗಳಲ್ಲಿ ಬರುವ ಪಾತ್ರಗಳು ಇಂದಿನ ಸಮಾಜದಲ್ಲಿ ಬರುವ ಪಾತ್ರಗಳಾಗಿವೆ. ರಾಮ, ಸೀತೆ, ರಾವಣ ಎಲ್ಲವೂ ನಮ್ಮ ಸಮಾಜದಲ್ಲಿ ನಮ್ಮ ಕಾನೂನಿನಲ್ಲಿ ಬಂದು ಹೋಗುವ ಪಾತ್ರಗಳೇ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್ ಕುಮಾರ್ ಮಾತನಾಡಿ, ದೇಶದಲ್ಲಿ ಬಹುತೇಕ ಅದರಲ್ಲೂ ಯುವ ಜನತೆ, ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ಸರಿಯಾದ ಮಾಹಿತಿ ಪಡೆದಿರುವುದಿಲ್ಲ. ಇದರಿಂದಾಗಿ ಅವರು ಕೆಲವೊಮ್ಮೆ ಸಂಕಷ್ಟಗಳಿಗೆ ಸಿಲುಕುತ್ತಾರೆ. ಆದರೆ ಆ ವೇಳೆ ನಮಗೆ ಕಾನೂನು ಗೊತ್ತಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಸಂವಿಧಾನದ ಅರಿವು ಬೆಳೆಸಿಕೊಳ್ಳುವುದು ಎಲ್ಲರ ಕರ್ತವ್ಯವೂ ಕೂಡ ಎಂದು ಹೇಳಿದರು.
ನಮ್ಮ ಸಂವಿಧಾನವೇ ಎಲ್ಲಾ ಕಾನೂನುಗಳ ತಾಯಿ. ಸಂವಿಧಾನದ ಪ್ರಕಾರ ಸಹಬಾಳ್ವೆ ನಡೆಸಬೇಕಾಗಿದೆ. ಆ ಮೂಲಕ ಸಮಾಜವನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಾಗಿದೆ. ಸಂವಿಧಾನದ ತತ್ವಗಳನ್ನು ತಿಳಿದುಕೊಳ್ಳಬೇಕಾಗಿದೆ. ಶಿಕ್ಷಣದಿಂದ ಮಾತ್ರ ದೇಶ ಉದ್ಧಾರವಾಗಲು ಸಾಧ್ಯ. ಶಿಕ್ಷಣದಿಂದ ನಮಗೆ ಕಾನೂನು, ಸಂವಿಧಾನದ ಅರಿವು, ದೇಶದ ಬಗ್ಗೆ ನಾವು ತಿಳಿದುಕೊಳ್ಳುತ್ತೇವೆ ಎಂದು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹರ್ಷಿ ವಾಲ್ಮೀಕಿ ಪ್ರತಿಷ್ಠಾನದ ಜಿಲ್ಲಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಸ್.ಬಸವರಾಜ್, ಸಹ ಕಾರ್ಯದರ್ಶಿ ಎ.ಎಸ್.ಮಂಜುನಾಥ್, ಸಂಪನ್ಮೂಲ ವ್ಯಕ್ತಿ ಎಂ.ಎನ್.ಆಂಜ ನೇಯ, ಸೀತಮ್ಮ ಕಾಲೇಜಿನ ಪ್ರಾಚಾರ್ಯ ಬಿ.ಪಾಲಾಕ್ಷಿ, ಉಪನ್ಯಾಸಕ ಕುಸು ಗಟ್ಟೆ, ಸಲಹಾ ಸಮಿತಿ ಸದಸ್ಯ ಕುಬೇರಪ್ಪ ಸೇರಿದಂತೆ, ಇತರರು ಇದ್ದರು.