ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಹೆಚ್ಚಿಸಲು ಕಸಾಪ ಪ್ರೇರಕವಾಗಲಿ

ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಹೆಚ್ಚಿಸಲು ಕಸಾಪ ಪ್ರೇರಕವಾಗಲಿ

ಜಗಳೂರಿನ ಕಾರ್ಯಕ್ರಮದಲ್ಲಿ ಬಿಆರ್‌ಸಿ ಡಿ.ಡಿ. ಹಾಲಪ್ಪ ಆಶಯ

ಜಗಳೂರು, ನ.16- ಶಾಲಾ-ಕಾಲೇಜು ಅಂಗಳದಲ್ಲಿ ನಡೆಯುವ  ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಹೆಚ್ಚಿಸುವಲ್ಲಿ ಪ್ರೇರಕವಾಗಲಿ ಎಂದು ಬಿಆರ್‌ಸಿ ಡಿ.ಡಿ. ಹಾಲಪ್ಪ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ಶಾಲಾ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಅತ್ಯಂತ ಶ್ರೀಮಂತ ಭಾಷೆಯಾಗಿದೆ‌. ಆದರೆ ಇಂದಿನ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಸರಳ, ಸಂಜ್ಞೆ, ಮೆಸೇಜ್‌ಗಳಲ್ಲಿ ತಲ್ಲೀನರಾಗಿದ್ದು ಕನ್ನಡ ಭಾಷೆಯ ಬರವಣಿಗೆ ಕೌಶಲ್ಯ, ಸಾಹಿತ್ಯಾಸಕ್ತಿ ಕುಂಠಿತವಾಗುತ್ತಿದೆ ಎಂದು ವಿಷಾದಿಸಿದರು.

ನಿವೃತ್ತ ಶಿಕ್ಷಕ ಕೆ‌.ವಿ‌.ರಾಘವೇಂದ್ರ, ಕವಿ ಕುಮಾರವ್ಯಾಸನ ಕುರಿತು ಉಪನ್ಯಾಸ ನೀಡಿ, ವ್ಯಾಸ ಮತ್ತು ವಾಲ್ಮೀಕಿ ಮಹರ್ಷಿಗಳು ಜೀವಂತವಾಗಿದ್ದ ಸಂದರ್ಭದಲ್ಲಿ ರಚಿಸಿದ  ರಾಮಾಯಣ ಹಾಗೂ ಮಹಾಭಾರತ ಮಹಾನ್ ಕಾವ್ಯಗಳು ಯಾವುದೇ ದಂತಕಥೆಗಳಲ್ಲ, ನೈಜ ಘಟನೆಗಳ ಇತಿಹಾಸಗಳಾಗಿವೆ‌. ನೈತಿಕ, ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ ಮಹತ್ವಗಳಿವೆ. ಆದ್ದರಿಂದಲೇ ಪ್ರತಿಯೊಬ್ಬರನ್ನೂ ಸೆಳೆಯುತ್ತವೆ ಎಂದು ಬಣ್ಣಿಸಿದರು.

6 ಶತಮಾನಗಳ ಹಿಂದೆ ಕವಿ ಕುಮಾರವ್ಯಾಸನ ಗದುಗಿನ ಭಾರತ ಎಂದು ಕರೆಯಲ್ಪಡುವ ಕರ್ನಾಟಕ ಭಾರತ ಕಥಾಮಂಜರಿ ಕಾವ್ಯ ಇಂದಿಗೂ ಶ್ರಾವಣ ಮಾಸದಲ್ಲಿ ಪುರಾಣವಾಗಿ ಜನಸಾಮಾನ್ಯರ ಮಾನಸದಲ್ಲಿ ಉಳಿದಿದೆ. ಅಲ್ಲದೆ ಸಾಂಸ್ಕೃತಿಕ, ಧಾರ್ಮಿಕ ಅಸ್ಮಿತೆ ಕಾಪಾಡಿಕೊಂಡಿದೆ‌ ಎಂದು ತಿಳಿಸಿದರು.

ಕಸಾಪ ತಾಲ್ಲೂಕು ಅಧ್ಯಕ್ಷೆ ಸುಜಾತಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ‌-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ 22 ಶಾಲಾ-ಕಾಲೇಜುಗಳಲ್ಲಿ ವಿವಿಧ ವಿಷಯಗಳೊಂದಿಗೆ ಉಪನ್ಯಾಸ ಮಾಲಿಕೆಗಳ ಅಭಿಯಾನ‌ ನಡೆಯಲಿದ್ದು, ವಿದ್ಯಾರ್ಥಿ ಸಮೂಹ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಹಿರಿಯ ಸಾಹಿತಿ ಎನ್.ಟಿ.ಎರಿಸ್ವಾಮಿ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಅವರ ಶಿಕ್ಷಣದ ಪರಿಕಲ್ಪನೆ ಇಂದಿಗೂ ಆದರ್ಶ. ವಿದ್ಯಾರ್ಥಿಗಳು ಪಠ್ಯಪುಸ್ತಕದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಬೇಕಿದೆ. ಸಾಹಿತ್ಯ ಲೋಕ ಶಿಕ್ಷಣದ ಒಂದು ಭಾಗವಾಗಿದ್ದು, ಸಾಹಿತ್ಯದ ಪ್ರಕಾರಗಳು ಬದುಕಿನ ಶೈಲಿಯ ಪ್ರತಿಬಿಂಬಗಳು ಎಂದು ತಿಳಿಸಿದರು.

ಸಮಾರಂಭದಲ್ಲಿ ತಾಲ್ಲೂಕು ದೈಹಿಕ‌ ಶಿಕ್ಷಣ ಪರಿವೀಕ್ಷಕ  ಸುರೇಶ್ ರೆಡ್ಡಿ,  ಮುಖ್ಯಶಿಕ್ಷಕ ಬಸವರಾಜ್,  ಸಾಹಿತ್ಯ ಪರಿಷತ್‌ ಪದಾಧಿಕಾರಿಗಳಾದ ಗೀತಾ ಮಂಜು, ಪಿ.ಎಸ್.ಅರವಿಂದನ್, ಎ.ಡಿ. ನಾಗಲಿಂಗಪ್ಪ, ಮಾರಪ್ಪ, ಡಿ.ಸಿ. ಮಲ್ಲಿಕಾರ್ಜುನ್, ಎಂ.ರಾಜಪ್ಪ, ಧನ್ಯಕುಮಾರ್, ಚಂಪಾವತಿ, ರೇವತಿ, ಮಾದಿಹಳ್ಳಿ ಮಂಜುನಾಥ್ ಮುಂತಾದವರು ಇದ್ದರು.

error: Content is protected !!