ರಾಣೇಬೆನ್ನೂರು – ಶಿಕಾರಿಪುರ ರೈಲು ಮಾರ್ಗದ ಕೆಲಸ ಆರಂಭ

ರಾಣೇಬೆನ್ನೂರು – ಶಿಕಾರಿಪುರ    ರೈಲು ಮಾರ್ಗದ  ಕೆಲಸ ಆರಂಭ

ರಾಣೇಬೆನ್ನೂರು, ನ.16- ಸ್ವಾತಂತ್ರ್ಯ ಬಂದ ಮೇಲೆ ಪ್ರಥಮ ಬಾರಿಗೆ ರಾಣೇಬೆನ್ನೂರಿನಿಂದ ಶಿಕಾರಿಪುರಕ್ಕೆ 2 ಸಾವಿರ ಕೋಟಿ ವೆಚ್ಚದಲ್ಲಿ ರೈಲು ಮಾರ್ಗ ನಿರ್ಮಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರು ತಲಾ ಒಂದೊಂದು ಸಾವಿರ ಕೋಟಿ ಹಣ ನೀಡಿದ್ದು, ಕಾರ್ಯಾರಂಭ ಮಾಡಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. 

ಇಲ್ಲಿನ ಗಂಗಾಜಲ ತಾಂಡಾ ಬಳಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಶಿವಾನಂದ ತಪೋವನ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

170 ಕೋಟಿ ರೂ. ವೆಚ್ಚದಲ್ಲಿ ರಾಣೇಬೆನ್ನೂರಿನಿಂದ ಶಿಕಾರಿಪುರ, ಆನಂದಪುರ ಮಾರ್ಗವಾಗಿ ಮಲೆನಾಡು ಸೇರುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಪಡಿಸುವ ಯೋಜನೆ ಕುರಿತು ಸಂಬಂಧಿಸಿದ ಅಧಿಕಾರಿಗಳು ಈಗಾಗಲೇ ಕಾರ್ಯೋನ್ಮುಖರಾಗಿದ್ದು, ಶೀಘ್ರವಾಗಿ ಕಾರ್ಯಾರಂಭ ಮಾಡಲಾಗುವುದು. ಈ ಎರಡೂ ಕಾಮಗಾರಿಗಳಿಂದ ಔದ್ಯೋಗಿಕ ಬೆಳವಣಿಗೆಯೊಂದಿಗೆ ಇಲ್ಲಿನ ವ್ಯಾಪಾರ ವಹಿವಾಟು,  ಉದ್ಯೋಗ ಹೆಚ್ಚಳವಾಗಲಿದೆ ಎಂದು ರಾಘವೇಂದ್ರ ವಿವರಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಪ್ರತಿ ಕುಟುಂಬದ ಮೊದಲ ಹೆಣ್ಣು ಮಗುವಿಗೆ ಒಂದು ಲಕ್ಷ ರೂ. ಕೊಡುವ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದರು. ಆ ಯೋಜನೆ ಅವಧಿ ಪೂರ್ಣಗೊಂಡಿದ್ದು, ಬರುವ ಜನವರಿಯಿಂದ ಒಂದು ಕೋಟಿ ಮಹಿಳೆಯರಿಗೆ ಬಡ್ಡಿ ಸೇರಿದಂತೆ ತಲಾ ಒಂದೂಕಾಲು ಲಕ್ಷ ಹಣ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಲಿದೆ ಎಂದು ರಾಘವೇಂದ್ರ ಹೇಳಿ, ಸರ್ಕಾರ ಹಾಗೂ ಭಕ್ತರ ದೇಣಿಗೆಯಿಂದ ನಿಮಾರ್ಣಗೊಂಡ ಈ ಮಠ ಸಮಗ್ರ ಅಭಿವೃದ್ಧಿಯಾಗಲಿ ಎಂದರು.

ಹಳ್ಳಿಗೆ ಏಕರಾತ್ರಿ, ಪಟ್ಟಣಕ್ಕೆ ಪಂಚರಾತ್ರಿ ಸಂಚರಿಸಿ ಭಕ್ತರ ಬದುಕಿಗೆ ಮಾರ್ಗದರ್ಶನ ನೀಡುತ್ತಾ ಅವರನ್ನ ಸನ್ಮಾರ್ಗದಲ್ಲಿ ನಡೆಸಿ, ಆರೋಗ್ಯಕರ ಸಮಾಜ ನೀಡುವಲ್ಲಿ ಮಠಗಳು  ಅನಾದಿ ಕಾಲದಿಂದಲೂ ಶ್ರಮಿಸುತ್ತಿವೆ. ಈ ದಿಶೆಯಲ್ಲಿ ದಿಂಡದಹಳ್ಳಿಯ ಶಿವಾನಂದ ಶ್ರೀಗಳ ಶ್ರಮ ಅಪಾರವಾದುದು ಎಂದು ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಶ್ರೀ ಮರುಳಸಿದ್ದೇಶ್ವರ, ಶ್ರೀ ನಾಗದೇವತೆ, ಶ್ರೀ ನವದುರ್ಗೆಯರು, ಶ್ರೀ ವೀರಭದ್ರೇಶ್ವರ, ಶ್ರೀ ವಿನಾಯಕ ಹಾಗೂ ನವಗ್ರಹ ಮೂರ್ತಿಗಳ ಪ್ರತಿಷ್ಠಾಪನೆಯಾಗಿದ್ದು ಭಕ್ತರು ತಮಗಿಷ್ಟವಾದ ದೇವರ ಆರಾಧನೆ ಮಾಡಿ,  ತಮ್ಮ ಬದುಕು ಹಸನಾಗಿಸಿಕೊಳ್ಳಬಹುದು  ಎಂದು ಮಠದ ಪೀಠಾಧಿಪತಿ ಪಶುಪತಿ ಶಿವಾನಂದ ಶ್ರೀಗಳು ಹೇಳಿದರು.

ಶನೇಶ್ಚರ ಮಠದ ಶಿವಯೋಗಿ ಶ್ರೀಗಳು, ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳು, ನಾಗವಂದ ಶಿವಯೋಗಿ ಶ್ರೀಗಳು, ಮಣಕೂರ ಮಲ್ಲಿಕಾರ್ಜುನ ಶ್ರೀಗಳು, ಮುಖಂಡರುಗಳಾದ ಕೆ.ಶಿವಲಿಂಗಪ್ಪ, ಎಸ್.ಎಸ್.ರಾಮಲಿಂಗಣ್ಣನವರ, ಸಂತೋಷ ಪಾಟೀಲ, ಸಿದ್ದಪ್ಪ ಚಿಕ್ಕಬಿದರಿ, ಪ್ರಭು ಕರ್ಜಗಿಮಠ, ಬಿ.ಎನ್.ಪಾಟೀಲ, ರಾಜು ಮೋಟಗಿ ಮತ್ತಿತರರಿದ್ದರು.

error: Content is protected !!