ಅಬಲ ವರ್ಗದ ಸಬಲೀಕರಣಕ್ಕೆ ಯೋಜನೆ ರೂಪಿಸಬೇಕು

ಅಬಲ ವರ್ಗದ ಸಬಲೀಕರಣಕ್ಕೆ ಯೋಜನೆ ರೂಪಿಸಬೇಕು

ಹರಪನಹಳ್ಳಿ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ತೆಗ್ಗಿನ ಮಠದ ಶ್ರೀ ವರಸದ್ಯೋಜಾತ ಸ್ವಾಮೀಜಿ ಆಶಯ

ಹರಪನಹಳ್ಳಿ, ನ.16- ಯುವ ಜನರು, ಮಹಿಳೆಯರು ಮತ್ತು ಸಮಾಜದ ಅಬಲ ವರ್ಗದವರನ್ನು ಸಬಲೀಕರಣ ಗೊಳಿಸಲು ಅನುಕೂಲಕರವಾದ ನೀತಿಗಳು ಮತ್ತು ಪರಿಣಾಮ ಕಾರಿ ಕಾರ್ಯ ಯೋಜನೆಗಳನ್ನು ರೂಪಿಸಬೇಕಿದೆ ಎಂದು  ತೆಗ್ಗಿನ ಮಠದ ಶ್ರೀ ವರಸದ್ಯೋಜಾತ ಶಿವಚಾರ್ಯ ಸ್ವಾಮೀಜಿ ಆಶಿಸಿದರು.

ಪಟ್ಟಣದ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ  ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿ,   ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ,  ಸಹಕಾರ ಇಲಾಖೆ ಬಳ್ಳಾರಿ, ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್, ರಾಯಚೂರು, ಬಳ್ಳಾರಿ, ಕೊಪ್ಪಳ, ಸಹಕಾರ ಹಾಲು ಒಕ್ಕೂಟ ಬಳ್ಳಾರಿ, ಇಪ್ಕೋ ಸಂಸ್ಥೆ ಹಾಗೂ ಕ್ರಿಬ್ಕೋ ಲಿ.,ಬಳ್ಳಾರಿ ಮತ್ತು  ಹರಪನಹಳ್ಳಿ ತಾಲ್ಲೂಕಿನ   ಸಹಕಾರ ಸಂಘಗಳ    ಸಂಯುಕ್ತ ಆಶ್ರಯದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ 70ನೇ ಅಖಿಲ ಭಾರತ ಸಹಕಾರ ಸಪ್ತಾಹ  ವನ್ನು ಉದ್ಘಾಟಿಸಿ ಶ್ರೀಗಳು ಮಾತನಾಡಿದರು.

ಬಡವರ, ವಿದ್ಯಾರ್ಥಿಗಳ ಸಂಜೀವಿನಿಯಾಗಿ ಸಹಕಾರ ಸಂಘಗಳು ಕೆಲಸ ನಿರ್ವಹಿಸಬೇಕು. ಆದರೆ, ಸಾಲವನ್ನು ತೆಗೆದುಕೊಳ್ಳುವಾಗ ಇರುವಂತಹ ಉತ್ಸಾಹ ಸಾಲ ತೀರಿಸುವಾಗ ಇರುವುದಿಲ್ಲ. ಬಹು ಮುಖ್ಯವಾಗಿ ಯಶಸ್ವಿನಿ ಯೋಜನೆಯನ್ನು ಎಲ್ಲಾ ವರ್ಗದ ಜನರು ಉಪಯೋಗಿಸಿಕೊಳ್ಳ ಬೇಕು. 

ಭಾರತ ಹಾಲು ಉತ್ಪಾದನೆಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಸಹಕಾರ ಸಂಘಗಳು ಅಭಿವೃದ್ಧಿ ಮಾನದಂಡವಲ್ಲ. ರಾಜ್ಯ ಬರಗಾಲದಿಂದ ತತ್ತರಿಸಿದ್ದು, ಕೃಷಿಕರ ಬದುಕು ದುಸ್ತರವಾಗಿದೆ. ಈ ನಿಟ್ಟಿನಲ್ಲಿ ಸಹಕಾರ ಸಂಘಗಳು ಬಡವರ, ರೈತರ ಪಾಲಿಗೆ ವರದಾನವಾಗಬೇಕು. ಡಿಜಿಟಲೀಕರಣದ ವ್ಯವಸ್ಥೆಯಲ್ಲಿ ಸಹಕಾರ ಸಂಘಗಳು ಉತ್ತಮ ದಾರಿಯಲ್ಲಿ ಸಾಗುತ್ತಿವೆ ಎಂದರು.

ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೆಶಕ  ವೈ.ಡಿ ಅಣ್ಣಪ್ಪ  ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಯೂನಿಯನ್ ಬ್ಯಾಂಕ್ ನಿರ್ದೇಶಕ ಶ್ರೀಧರ ಗೋಸಾಲೆ ಮಾತನಾಡಿದರು.

ಹಿರಿಯ ಪತ್ರಕರ್ತ ಹೆಚ್.ಬಿ.  ಮಂಜುನಾಥ್ ಮಾತನಾಡಿ,  ಸಹಕಾರಿ ಚಳುವಳಿ 19ನೇ ಶತಮಾನದಲ್ಲಿ ಪ್ರಾರಂಭವಾಗಿ ಜನತೆಯ ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ  ಶ್ರಮಿಸುತ್ತಾ ಬಂದಿದೆ.  ಗಾತ್ರದಲ್ಲಿ, ವ್ಯಾಪ್ತಿಯಲ್ಲಿ ಸಾಧನೆಯಲ್ಲಿ  ವಿಶ್ವದಲ್ಲಿಯೇ ಬೃಹತ್ತಾದುದು, ಮಹತ್ತರವಾದುದೂ ಆಗಿದೆ. ಜನಸಾಮಾನ್ಯರ ಕಾಮಧೇನು ಕಲ್ಪವೃಕ್ಷ ಎನಿಸಿಕೊಂಡಿದ್ದು, ಇಂದು  ಹೆಮ್ಮರವಾಗಿ ಬೆಳೆದಿದೆ ಎಂದರು.

ಬಳ್ಳಾರಿ ಜಿಲ್ಲಾ ಸಹಕಾರಿ  ಯೂನಿಯನ್ ಉಪಾಧ್ಯಕ್ಷ ಬಿ.ಕೆ ಕೆರೆಕೋಡಪ್ಪ, ಬಳ್ಳಾರಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಗಿಡ್ಡಳ್ಳಿ ನಾಗರಾಜ, ಯೂನಿಯನ್‌ನ ಹೆಚ್.ತಿಮ್ಮಾನಾಯ್ಕ, ಟಿಎಪಿಸಿಎಂಎಸ್ ಅಧ್ಯಕ್ಷರಾದ  ನೇತ್ರಾವತಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾದ ಎಚ್.ವಿಶಾಲಾಕ್ಷಮ್ಮ, ಮುಖಂಡರಾದ ಪುಷ್ಪಾ ದಿವಾಕರ, ಚಂದ್ರಶೇಖರ ಪೂಜಾರ್, ಮಂಜುಳಾ ಗುರುಮೂರ್ತಿ, ಅರಸಿಕೇರಿ ಬಿಡಿಸಿಸಿ ಬ್ಯಾಂಕ್  ಕ್ಷೇತ್ರ ಅಧಿಕಾರಿ ಹೆಚ್.ಅಂಜಿನಪ್ಪ. ಟಿಎಪಿಸಿಎಂಎಸ್ ಕಾರ್ಯನಿರ್ವಹ ಣಾಧಿಕಾರಿ  ಹೆಚ್.ತಿರುಪತಿ, ನಿಚ್ಚವನಹಳ್ಳಿ ವೈ.ಗೋಣಿಬಸಪ್ಪ, ಹರಪನಹಳ್ಳಿಯ ಡಿ.ಬಸವರಾಜ, ಬಾಣದ ಯಂಕಪ್ಪ  ಸೇರಿದಂತೆ ಇತರರು ಇದ್ದರು.

error: Content is protected !!