ಆರೋಗ್ಯದಾತ ಧನ್ವಂತರಿ ದೇವರು

ಆರೋಗ್ಯದಾತ ಧನ್ವಂತರಿ ದೇವರು

ದಾವಣಗೆರೆ, ನ. 15 – ಆಶ್ವಯುಜ ಕೃಷ್ಣಪಕ್ಷ ತ್ರಯೋದಶಿಯಂದು ಧನತ್ರಯೋದಶಿ ಅಥವಾ ಧನ್ವಂತರಿ ಜಯಂತಿ ಬಹು ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವ ಆಚರಣೆಯಾಗಿದೆ. ಶ್ರೀಮನ್ನಾರಾಯಣನು ದೇವೋತ್ತಮರ ರಕ್ಷಣೆಗಾಗಿ ಆರೋಗ್ಯವನ್ನು ಕರುಣಿಸುವ ಸಲುವಾಗಿ ಸಮುದ್ರ ಮಂಥನದ ಸಂದರ್ಭದಲ್ಲಿ ಅವತರಿಸಿದ ರೂಪವೇ ಧನ್ವಂತರಿ ದೇವರು. ಈ ದಿನ ಧನ್ವಂತರಿಯ ಹುಟ್ಟು ಹಬ್ಬವು ಹೌದು ಎಂದು ಶ್ರೀ ವೇದಬ್ರಹ್ಮ ಗೋಪಾಲ ಆಚಾರ್ ಮಣ್ಣೂರು ತಿಳಿಸಿದರು.

ನಗರದ ದೇವರಾಜ ಅರಸು ಬಡಾವಣೆ ‘ಸಿ’ ಬ್ಲಾಕ್‍ನಲ್ಲಿರುವ ಆದರ್ಶಯೋಗ ಪ್ರತಿಷ್ಠಾನ, ಶ್ರೀ ಮಹಾಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಧನ್ವಂತರಿ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ವಿಶೇಷ ಪೂಜೆ ಮತ್ತು ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. 

ಶ್ರೀಸೂಕ್ತದಲ್ಲಿ ಭೂಮಿ, ಜಲ, ವಾಯು, ಅಗ್ನಿ ಮತ್ತು ಸೂರ್ಯ ಇವುಗಳಿಗೆ ಧನವೆಂದೇ ಹೇಳಲಾಗಿದೆ. ಯಾವ ಧನಕ್ಕೆ ನಿಜವಾದ ಅರ್ಥವಿದೆಯೋ ಅವಳೇ ನಿಜವಾದ ಲಕ್ಷ್ಮಿಯಾಗಿದ್ದಾಳೆ. ಭಾರತೀಯ ವೈದ್ಯ ಪದ್ಧತಿಯಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿ ಇಂದಿಗೂ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಆರೋಗ್ಯವನ್ನು ಕೊಡುವ ಪದ್ಧತಿಯಾಗಿದೆ.

ಹೀಗಾಗಿ ನೆಮ್ಮಲ್ಲರ ಆರೋಗ್ಯದಾತನಾದ ಧನ್ವಂತರಿ ದೇವನನ್ನು ಆಯುರ್ವೇದ ಮಹಾಶಾಸ್ತ್ರದಲ್ಲಿ ಇಂದಿಗೂ ಪೂಜಿಸಿಕೊಂಡು ಬಂದಿರುವ ಪದ್ಧತಿಯಾಗಿದೆ. ಈ ಮಹಾದಿನದಂದು ಯಾರು ಧನ್ವಂತರಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೋ ಅವರಿಗೆ ಸದಾ ಆರೋಗ್ಯ, ಐಶ್ವರ್ಯ, ಸಮೃದ್ಧಿ, ಶಾಂತಿ, ಸುಃಖವನ್ನು ಧನ್ವಂತರಿ ದೇವರು ಕರುಣಿಸುವನು. ಇದು ಈ ದಿನದ ಮಹತ್ವವಾಗಿದೆ ಎಂದು ಸಮುದ್ರ ಮಂಥನದ ಕಾಲದಲ್ಲಿ ದೇವರಿಗೂ ಮತ್ತು ರಾಕ್ಷಸ ಗಣಕ್ಕೆ ನಡೆದ ಘಟನೆಯನ್ನು ಕಥಾ ರೂಪಕವಾಗಿ ಮನಮುಟ್ಟುವಂತೆ ಗೋಪಾಲ ಆಚಾರ್ ಮಣ್ಣೂರು ವಿವರಿಸಿದರು. 

ಯೋಗಾಚಾರ್ಯ ರಾಘವೇಂದ್ರ ಗುರೂಜಿ ಅಗ್ನಿ ಹೋತ್ರ ಹೋಮವನ್ನು ಮಂತ್ರ ಘೋಷದೊಂದಿಗೆ ಹೇಳಿಕೊಟ್ಟರು. ಪೂಜಾ ಕಾರ್ಯಕ್ರಮವನ್ನು ಸಿರಿಗೆರೆ ಕೆ.ಪಿ.ಟಿ.ಸಿ.ಎಲ್.ನ ಸಹಾಯಕ ಅಭಿಯಂತರ ಚೇತನ್ ಬಿ. ಮತ್ತು ಶ್ರೀಮತಿ ಶ್ವೇತಾ ಸಿ. ಒಡೆಯರ್ ಅವರು  ನೆರವೇರಿಸಿದರು.

ಶ್ರೀಮತಿ ಗೌರಮ್ಮ ರಂಗೋಲಿ ಸೇವೆ, ಹಣಕಾಸು, ವ್ಯವಹಾರ ಸಲಹೆಗಾರ ಹೆಚ್. ಮಂಜುನಾಥ್ ಹೂವಿನ ಅಲಂಕಾರ ಸೇವೆ, ನಿವೃತ್ತ ತಹಶೀಲ್ದಾರ್ ವಿಶ್ವನಾಥಯ್ಯ ಪ್ರಸಾದ ಸೇವೆ ಅರ್ಪಿಸಿದರು. ಮುಖೇಶ್ ದೇವ್, ಪೃಥ್ವಿದೇವ್, ಎಂ.ಎಂ. ಪ್ರಶಾಂತ್ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. 

ಸಗಟು ಔಷಧಿ ವ್ಯಾಪಾರಿ ಸುನೀಲ್‍ಕುಮಾರ್, ಸಂದೀಪ್ ವಡೋನಿ, ಭರತ್ ವಡೋನಿ, ಮೀಸಲು ಆರಕ್ಷಕ ಇಲಾಖೆಯ ಚಂದ್ರ, ಮಹಂತೇಶ್ ಇನ್ನಿತರರು ಭಾಗವಹಿಸಿದ್ದರು.  

error: Content is protected !!