ಸನಾತನ ಹಿಂದೂ ಧರ್ಮವು ಸರ್ವಜನರ ಹಿತಚಿಂತಕ

ಸನಾತನ ಹಿಂದೂ ಧರ್ಮವು ಸರ್ವಜನರ ಹಿತಚಿಂತಕ

ಮಲೇಬೆನ್ನೂರಿನಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಅಭಿಮತ

ಮಲೇಬೆನ್ನೂರು, ನ.13- ಪ್ರಸ್ತುತ ಎಲ್ಲಾ ರಂಗಗಳಲ್ಲೂ ಅಸ್ತವ್ಯಸ್ತ ಹಾಗೂ ಅಶಾಂತಿ ತಾಂಡವವಾಡುತ್ತಿದ್ದು, ಇದಕ್ಕೆ ಧರ್ಮವೂ ಹೊರತಲ್ಲ ಎಂದು ರಂಭಾಪುರಿ ಪೀಠದ ಜಗದ್ಗುರು ಶ್ರೀ ಡಾ. ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀ ಗುರು  ರೇಣುಕ ರೈಸ್‌ ಇಂಡಸ್ಟ್ರೀಸ್‌ನಲ್ಲಿ ನಿನ್ನೆ ಹಮ್ಮಿಕೊಂಡಿದ್ದ ದೀಪಾವಳಿ ಅಮಾವಾಸ್ಯೆಯ ಲಕ್ಷ್ಮೀ ಪೂಜೆ ಯಲ್ಲಿ ಪಾಲ್ಗೊಂಡ ನಂತರ ಜಗದ್ಗುರುಗಳು `ಜನತಾವಾಣಿ’ಯೊಂದಿಗೆ ಮಾತನಾಡಿದರು.

ಸನಾತನವಾದ ಹಿಂದೂ ಧರ್ಮವು ಸರ್ವಜನರ ಹಿತ ಬಯಸುತ್ತಾ ಬಂದಿದ್ದು, ಇದಕ್ಕೆ ದಕ್ಕೆ ತರುವ ಕೆಲಸವನ್ನು ಯಾರೇ ಮಾಡಿದರೂ ಅವರು ಕೈಸುಟ್ಟುಕೊಳ್ಳುವುದು ನಿಶ್ಚಿತ ಎಂದರು.

ಮನುಷ್ಯ ಬೌದ್ಧಿಕವಾಗಿ ಎಷ್ಟೇ ಬೆಳೆದಿದ್ದರೂ ಅಧ್ಯಾತ್ಮಿಕ ನೆಲೆ ಇಲ್ಲದೇ ಬದುಕಲು ಸಾಧ್ಯವಿಲ್ಲ ಎಂದ ಶ್ರೀಗಳು, ಆಧುನಿಕತೆಯ ಜಗತ್ತಿನಲ್ಲಿ ವೈಚಾರಿಕತೆಯ ಭರಾಟೆಯಲ್ಲಿ ಮನುಷ್ಯ ನಮ್ಮ ಸಂಸ್ಕೃತಿ-ಸಂಸ್ಕಾರಗಳನ್ನು ನಿರ್ಲಕ್ಷಿಸುತ್ತಿದ್ದಾನೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು. ವಿಜ್ಞಾನ ದಲ್ಲಿ ನಾವು ಎಷ್ಟೇ ಮುಂದುವರೆದಿದ್ದರೂ ಗುರು-ಹಿರಿಯರ ಆದರ್ಶವನ್ನು ನಮ್ಮ ಯುವ ಜನಾಂಗ ಅಳವಡಿಸಿಕೊಳ್ಳಬೇಕು. ವಿಶ್ವ ಬಾಂಧವ್ಯದ ಕನಸು ಕಾಣಬೇಕೆಂದು ಕರೆ ಕೊಟ್ಟರು. ಮನುಷ್ಯನ ಜೀವನದಲ್ಲಿ ಪ್ರಗತಿ ಮತ್ತು ಪ್ರಶಾಂತತೆ ಕಾಣಬೇಕಾದರೆ ಗುರಿ ಮತ್ತು ಗುರು ಬಹಳ ಮುಖ್ಯವಾಗಿವೆ. ಈ ಹಿನ್ನೆಲೆಯಲ್ಲಿ ಯುವಕರು ಸಾಮರಸ್ಯದ ಹೆಜ್ಜೆ ಇಡಬೇಕೆಂದರು.

ರಾಜಕೀಯ ಪಕ್ಷಗಳಲ್ಲಿ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಯುವಜನಾಂಗಕ್ಕೆ ಆದ್ಯತೆ ನೀಡಬೇಕು. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಬೆಳೆಸುವ ಕೆಲಸವನ್ನು ಪಕ್ಷದ ಹಿರಿಯರು ಮಾಡಬೇಕು. ಅಂತಹ ಕೆಲಸ ಇದೀಗ ಬಿಜೆಪಿಯಲ್ಲಿ ಆಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಬಿ.ವೈ. ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಮೂಲಕ ಯುವ ಜನರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರ ಹಾದಿಯಲ್ಲಿ ಅವರ ಮಗ ವಿಜಯೇಂದ್ರ ಕೂಡಾ ಒಳ್ಳೆಯ ಕೆಲಸ ಮಾಡಲಿ ಮತ್ತು ಅಸಮಾಧಾನಗೊಂಡಿರುವ ಹಿರಿಯರನ್ನು ವಿಶ್ವಾಸಕ್ಕೆ ಪಡೆದು ಅವರ ಮಾರ್ಗದರ್ಶನದಲ್ಲಿ ವಿಜಯೇಂದ್ರ ಸಂಘಟನೆಯ ಕೆಲಸ ಮಾಡಲಿ ಎಂದು ರಂಭಾಪುರಿ ಶ್ರೀಗಳು ಶುಭ ಹಾರೈಸಿದರು.

ಬಿ.ಎಸ್‌. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಎಲ್ಲಾ ಜಾತಿ, ಧರ್ಮಗಳ ಜನರ ಭಾವನೆಗಳಿಗೆ ಪೂರಕವಾಗಿ ಕೆಲಸ ಮಾಡುವ ಮೂಲಕ ಮಾದರಿಯಾಗಿದ್ದರು. ಅವರಂತೆ ವಿಜಯೇಂದ್ರ ಕೂಡಾ ನಡೆದುಕೊಳ್ಳಲಿ ಎಂದು ಶ್ರೀಗಳು ಕಿವಿಮಾತು ಹೇಳಿದರು.

ರಾಜಕೀಯ ಕ್ಷೇತ್ರವನ್ನು ಬಲಾಢ್ಯವಾಗಿ ಬೆಳೆಸುವ ನಿಟ್ಟಿನಲ್ಲಿ ಯುವಕರ ಕೈಗೆ ಅಧಿಕಾರದ ಜೊತೆಗೆ ಸೂಕ್ತ ಮಾರ್ಗದರ್ಶನವನ್ನು ಆಯಾ ಪಕ್ಷದ ಹಿರಿಯರು ಮಾಡಬೇಕೆಂದು ರಂಭಾಪುರಿ ಶ್ರೀಗಳು ಕಿವಿ ಮಾತು ಹೇಳಿದರು.

ಈ ದೀಪಾವಳಿ ಅಜ್ಞಾನದ ಕತ್ತಲನ್ನು ದೂರಮಾಡಿ ಸುಜ್ಞಾನದ ಬೆಳಕನ್ನು ಎಲ್ಲೆಡೆ ಪಸರಿಸಲಿ ಎಂದು ಶುಭ ಹಾರೈಸಿದರು. 

ಹಿರಿಯರಾದ ಬಿ.ಎಂ. ನಂಜಯ್ಯ, ಜಿ.ಪಂ. ಮಾಜಿ ಸದಸ್ಯ ಬಿ.ಎಂ. ವಾಗೀಶ್‌ಸ್ವಾಮಿ, ಪುರಸಭೆ ಮಾಜಿ ಉಪಾಧ್ಯಕ್ಷ ಬಿ.ಎಂ. ಚನ್ನೇಶ್‌ ಸ್ವಾಮಿ, ಗುತ್ತಿಗೆದಾರರಾದ ಬಿ.ಎಂ. ಜಗದೀಶ್ವರ ಸ್ವಾಮಿ, ರೇಣುಕಾರಾಧ್ಯ, ಸಿದ್ದಲಿಂಗೇಶ್ವರ ರೈಸ್‌ ಮಿಲ್‌ ಮಾಲೀಕರಾದ ಬಿ.ಎಂ. ಸಿದ್ದಲಿಂಗಸ್ವಾಮಿ, ಬಿ.ಎಂ. ಹಾಲ ಸ್ವಾಮಿ, ಹರಳಹಳ್ಳಿಯ ಬಸವರಾಜಯ್ಯ, ಸಂಗಮೇಶ್‌, ಕೆ.ಜಿ. ರಂಗನಾಥ್‌, ಸಿರಿಗೆರೆ ಶೇಖರಪ್ಪ, ಪಿ.ಹೆಚ್‌. ಶಿವಕುಮಾರ್‌, ಪಿ.ಆರ್‌. ರಾಜು, ದಾವಣಗೆರೆಯ ಬಿ.ಎಂ. ಚಂದ್ರಶೇಖರಯ್ಯ, ಹಾಲಿವಾಣದ ಮೋಹನ್‌ ಮತ್ತಿತರರು ಹಾಜರಿದ್ದರು.

ಇಷ್ಟಲಿಂಗ ಪೂಜೆ : ಇದಕ್ಕೆ ಮುನ್ನ ರಂಭಾಪುರಿ ಶ್ರೀಗಳು ಬಿ.ಎಂ. ನಂಜಯ್ಯನವರ ಮನೆಯಲ್ಲಿ ಇಷ್ಟಲಿಂಗ ಪೂಜೆಯನ್ನು ನೆರವೇರಿಸಿದರು.

error: Content is protected !!