ಕಾರ್ಮಿಕರ ಮಕ್ಕಳ ಶಿಷ್ಯವೇತನ ಭಾರೀ ಪ್ರಮಾಣದಲ್ಲಿ ಕಡಿತ

ಕಾರ್ಮಿಕರ ಮಕ್ಕಳ ಶಿಷ್ಯವೇತನ ಭಾರೀ ಪ್ರಮಾಣದಲ್ಲಿ ಕಡಿತ

 ಎಐಡಿಎಸ್ಓ ಖಂಡನೆ

 ದಾವಣಗೆರೆ, ನ.13- ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಶಿಷ್ಯವೇತನವನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿರುವ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಎಐಡಿಎಸ್ಓ ಸಂಘಟನೆ  ಕಾರ್ಮಿಕ ಸಚಿವರನ್ನು ಆಗ್ರಹಿಸಿದೆ.

ರಾಜ್ಯದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಶಿಷ್ಯವೇತನವನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ಪ್ರತಿ ವಿದ್ಯಾರ್ಥಿಗೆ ವಾರ್ಷಿಕ 5,000 ದಿಂದ 60,000ದವರೆಗೆ ವಿತರಿಸಲ್ಪಡುತ್ತಿದ್ದ ವಿದ್ಯಾರ್ಥಿ ವೇತನದ ಮೊತ್ತವನ್ನು 1100 ರಿಂದ 11,000ಕ್ಕೆ ಇಳಿಸಲಾಗಿದೆ.

ಈಗಾಗಲೇ ಎಲ್ಲಾ ಹಂತದ ಶಿಕ್ಷಣವು ವ್ಯಾಪಾರೀಕರಣಗೊಂಡು ಶುಲ್ಕಗಳು ಗಗನಕ್ಕೇರಿವೆ. ಬಡ ಕಾರ್ಮಿಕರ ಮಕ್ಕಳು ಶಿಕ್ಷಣವನ್ನು ಪಡೆಯುವುದು ಅತ್ಯಂತ ದುಸ್ತರವಾಗಿರುವ ಇಂದಿನ ಪರಿಸ್ಥಿತಿಯಲ್ಲಿ, ಸರ್ಕಾರದ ಶಿಷ್ಯವೇತನವು ಸಾಕಷ್ಟು ಸಹಕಾರಿಯಾಗಿತ್ತು. ಈ  ಶಿಷ್ಯವೇತನದಿಂದಾಗಿ ಬಡ ಕಾರ್ಮಿಕರ ಮಕ್ಕಳು ಇಂಜಿನಿಯರಿಂಗ್ ಮತ್ತು ಮೆಡಿಕಲ್ ಸೇರಿದಂತೆ, ಉನ್ನತ ವ್ಯಾಸಂಗವನ್ನು ಪಡೆಯಬಹುದಾಗಿದೆ. ಆದರೆ ಈಗ ಭಾರೀ ಪ್ರಮಾಣದಲ್ಲಿ ಶಿಷ್ಯವೇತನದ ಮೊತ್ತವನ್ನು ಕಡಿತಗೊಳಿಸಿರುವುದು ಕಾರ್ಮಿಕರ ಮಕ್ಕಳ ಶಿಕ್ಷಣದ ಕನಸುಗಳನ್ನು ಚಿವುಟಿ ಹಾಕಿದಂತಾಗಿದೆ.

ಸೆಸ್ ಹೆಸರಲ್ಲಿ ಸಂಗ್ರಹವಾಗುತ್ತಿರುವ ಹಣವು ಕಾರ್ಮಿಕ ನಿಧಿಯಲ್ಲಿ ಹೇರಳವಾಗಿ ಶೇಖರಣೆಯಾಗುತ್ತಿದೆ. ಇದು ಕಾರ್ಮಿಕರ ಬೆವರಿನ ಫಲ ಮತ್ತು ಇದನ್ನು ಸಂಪೂರ್ಣವಾಗಿ ಅವರ ಏಳಿಗೆಗೆ ಬಳಸಬೇಕು.   ಸರ್ಕಾರ ಕೂಡಲೇ ಈ ಕುರಿತು ಗಮನ ಹರಿಸಿ, ಕಡಿತಗೊಳಿಸಿರುವ ಶಿಷ್ಯವೇತನದ ಮೊತ್ತವನ್ನು ಹೆಚ್ಚಿಸಬೇಕು ಮತ್ತು ಈ ಮೂಲಕ ಬಡ ಕಾರ್ಮಿಕರ ಮಕ್ಕಳ ಭವಿಷ್ಯವನ್ನು ರೂಪಿಸಲು ನೆರವಾಗಬೇಕೆಂದು ಎಐಡಿಎಸ್ಓ ಆಗ್ರಹಿಸಿ,  ರಾಜ್ಯ ವ್ಯಾಪಿ ಎಲ್ಲಾ ಜಿಲ್ಲೆಗಳಲ್ಲಿಯೂ ಜಿಲ್ಲಾಧಿಕಾರಿಗಳ ಮೂಲಕ ಕಾರ್ಮಿಕ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಹಾಗೆಯೇ  ಜಿಲ್ಲೆಯಲ್ಲಿಯೂ ಸಲ್ಲಿಸಲಾಯಿತು.  

ಈ ಸಂದರ್ಭದಲ್ಲಿ ಎಐಡಿಎಸ್ಓ   ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ  ಹಾಗೂ ಚಿರಂಜೀವಿ, ನಂದೀಶ್  ಮತ್ತಿತರರು ಉಪಸ್ಥಿತರಿದ್ದರು ಎಂದು ಸುಮನ್ ಟಿ.ಎಸ್ ತಿಳಿಸಿದ್ದಾರೆ.

error: Content is protected !!