ಗಾಳಿಗೆ ವಿಷ, ದೇಹಕ್ಕೆ ಅಪಾಯ, ಕಿವಿಗೆ ಅಘಾತ ತರುವ ಆಚರಣೆ ಬೇಡ

ಗಾಳಿಗೆ ವಿಷ, ದೇಹಕ್ಕೆ ಅಪಾಯ, ಕಿವಿಗೆ ಅಘಾತ ತರುವ ಆಚರಣೆ ಬೇಡ

ದಾವಣಗೆರೆ, ನ. 13 – ದೀಪಾವಳಿ ಹಬ್ಬವನ್ನು ನಾವೆಲ್ಲಾ ಸಡಗರ ಸಂಭ್ರಮದಿಂದ ಆಚರಿಸೋಣ. ಆ ದೀಪಾವಳಿ ಪರಿಸರ ಸ್ನೇಹಿ ದೀಪಾವಳಿಯಾಗಿರಲಿ. ಗಾಳಿಗೆ ವಿಷ, ದೇಹಕ್ಕೆ ಅಪಾಯ, ಕಿವಿ-ಹೃದಯಕ್ಕೆ ಆಘಾತ ತರುವಂ ತಹ ಆಚರಣೆ ಬೇಡವೆಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಎಂ.ಗುರುಸಿದ್ಧಸ್ವಾಮಿ ತಿಳಿಸಿದರು.

ನಗರದ ಬಾಲ ಭವನದಲ್ಲಿ ಮೊನ್ನೆ ಏರ್ಪಡಿಸಿದ್ದ ವಾರಾಂತ್ಯ ಕಾರ್ಯಕ್ರಮದಲ್ಲಿ `ಸುರಕ್ಷಾ ದೀಪಾವಳಿ’ ಆಚರಣೆ ಕುರಿತು ಮಾತನಾಡಿದ ಅವರು, 125 ಡೆಸಿಬಲ್‍ಗೂ ಹೆಚ್ಚು ಪ್ರಮಾಣದ ಶಬ್ಧವನ್ನು ನಿಷೇಧಿಸಿದೆ. ಆಸ್ಪತ್ರೆ-ವೃದ್ಧಾಶ್ರಮಗಳ ಹತ್ತಿರ ಪಟಾಕಿ ಸಿಡಿಸಬಾರದು. ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಪಟಾಕಿ ಸಿಡಿಸುವುದನ್ನು ಸರ್ಕಾರ ನಿಷೇಧಿಸಿದೆ. ಆದರೂ ಕೂಡ ರಾತ್ರಿಯೆಲ್ಲಾ ನಿರಂತರವಾಗಿ ಪಟಾಕಿ ಸಿಡಿಸಲಾಗುತ್ತದೆ. ಇದರಿಂದ ನಮಗಷ್ಟೇ ಅಲ್ಲ, ಪ್ರಕೃತಿಯಲ್ಲಿರುವ ಎಲ್ಲಾ ಜೀವ ಸಂಕುಲಕ್ಕೂ ತೊಂದರೆಯಾಗಲಿದೆ ಎಂದರು.

ಈ ಪ್ರಕೃತಿ ಹೇಳುತ್ತಿದೆ. ನೀವು ನನ್ನನ್ನು ರಕ್ಷಿಸಿದರೆ ನಾನು ನಿಮ್ಮ ರಕ್ಷಿಸುವೆ. ಆದ್ದರಿಂದ ವಿಷ, ಬೆಂಕಿ, ಶಬ್ದಗಳ ವಿಕೃತಿಗೆ ವಿದಾಯ ಹೇಳೋಣ. ಪ್ರಕೃತಿಯ ಮಡಿಲಲ್ಲಿ ದೀಪಾವಳಿ ಆಚರಿಸೋಣ. ದೀಪಾವಳಿಯನ್ನು ಸಡಗರ, ಸಂಭ್ರಮದಿಂದ ಆಚರಿಸಬೇಕು. ನಮ್ಮ ಮಕ್ಕಳಿಗೆ ಒಳ್ಳೆಯ ಬದುಕಿನ ಪಾಠ ಹೇಳಬೇಕು. `ಪಟಾಕಿ ಬೇಡ, ಹಚ್ಚಿರಿ ಹಣತೆ’ ಎಂಬ ಘೋಷ ವಾಕ್ಯದೊಂದಿಗೆ ಈ ಬಾರಿಯ ದೀಪಾವಳಿಯನ್ನು ನಾನು-ನೀವೆಲ್ಲಾ ಸಂಭ್ರಮದಿಂದ ಆಚರಿಸೋಣವೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಬಾಲಭವನದ ಸಂಯೋಜಕರಾದ ಎಸ್.ಬಿ. ಶಿಲ್ಪ, ಮಕ್ಕಳ ಸಹಾಯ ವಾಣಿಯ ರಾಜು ಗುಳೇದ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಶಾಮನೂರಿನ ನಾಗಮ್ಮ ಕೇಶವಮೂರ್ತಿ ಬಡಾವಣೆಯ ಸರ್ಕಾರಿ ಶಾಲಾ ಮಕ್ಕಳು ಪ್ರಾರ್ಥಿಸಿದರು. 

error: Content is protected !!