ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಅತ್ಯಗತ್ಯ : ಶಾಸಕ ದೇವೇಂದ್ರಪ್ಪ

ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಅತ್ಯಗತ್ಯ : ಶಾಸಕ ದೇವೇಂದ್ರಪ್ಪ

ಜಗಳೂರು, ನ. 12 – ಸುಂದರ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಅತ್ಯಗತ್ಯ ಎಂದು ಶಾಸಕ ಬಿ. ದೇವೇಂದ್ರಪ್ಪ  ಹೇಳಿದರು‌.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಎನ್.ಎಸ್.ಎಸ್. ಸಾಂಸ್ಕೃತಿಕ, ಕ್ರೀಡಾ, ಯುವ ರೆಡ್ ಕ್ರಾಸ್, ರೋವರ್ಸ್, ಐಕ್ಯೂ ಎಸಿ, ಸಮಿತಿಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಅಕ್ಷರ ಜ್ಞಾನದಿಂದ ಅಂಧಕಾರ ನಿರ್ಮೂಲನೆ ಸಾಧ್ಯ. ವಿದ್ಯಾರ್ಥಿಗಳು ಸುಂದರ ಭವಿಷ್ಯ ರೂಪಿಸಿಕೊಂಡು ದೇಶದ  ಸತ್‌ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದರು.

ನಾನು ವ್ಯಾಸಂಗ ಮಾಡುವಾಗ ಕೂಲಿ ಕೆಲಸ ಮಾಡಿದ್ದೆ. ಆದರೆ ನಿಮಗೆ ಅಂತಹ ಕಷ್ಟದ ಜೀವನ ಬಂದಿಲ್ಲ, ಸರ್ಕಾರದ ಸೌಲಭ್ಯಗಳಿವೆ. ಸದುಪಯೋಗ ಪಡೆದುಕೊಳ್ಳಬೇಕು ಎಂದು  ಸಲಹೆ ನೀಡಿದರು.

 ಕಾಲೇಜಿನ ಸರ್ವತೋಮುಖ ಅಭಿವೃದ್ದಿಗೆ  ಹೆಚ್ಚಿನ ಅನುದಾನ ತಂದು ಬೇಡಿಕೆಯಂತೆ  ಸಭಾಭವನ, ಸಾರಿಗೆ, ಮೂಲಸೌಕರ್ಯ ಒದಗಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ಬಂಡಾಯ ಸಾಹಿತಿ, ನಿವೃತ್ತ ಪ್ರಾಂಶು ಪಾಲ ಡಾ.ಸಿ. ಶಿವಲಿಂಗಪ್ಪ ಉಪನ್ಯಾಸ ನೀಡಿ, ವಿದ್ಯಾರ್ಥಿ ಸಮೂಹ ಕಾಲೇಜು ಹಂತದಲ್ಲಿ ಮಾನಸಿಕ ಚಂಚಲತೆ ನಿಗ್ರಹಿಸಿ ವ್ಯಾಸಂಗಕ್ಕೆ ಮಹತ್ವ ಕೊಡಿ. ನಿರ್ಲಕ್ಷ್ಯ ವಹಿಸಿ ಉಜ್ವಲ ಭವಿಷ್ಯಕ್ಕೆ ಸಂಚಕಾರ ತಂದುಕೊಳ್ಳಬೇಡಿ. ಪೋಷಕರ ಶ್ರಮ, ಸಮಾಜದ ಅಭಿವೃದ್ದಿ ಚಿಂತನೆಯನ್ನು ಅವಲೋಕನ ಮಾಡಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.

ಎನ್ಇಪಿ ಜಾರಿಯಿಂದ ಉನ್ನತ ಶಿಕ್ಷಣದಲ್ಲಿ ಯಶಸ್ಸು ಅಸಾಧ್ಯ ಎಂಬ ತಜ್ಞರ ವಾದವಿದೆ. ಕೌಶಲ್ಯದ ನೆಪದಲ್ಲಿ ಮಾನವ ಕೇಂದ್ರಿತ ಶಿಕ್ಷಣ ಮಾರುಕಟ್ಟೆ ಕೇಂದ್ರಿತವಾಗುತ್ತಿದೆ. ಕೆಲವರ ಪಾಲಾಗಿ  ಉಳಿದವರು ವಂಚಿತರಾಗುತ್ತಿದ್ದಾರೆ ಎಂದು ಆತಂಕ‌ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ. ರಾಜೇಶ್ವರಿ ಪೂಜಾರ್, ಪ.ಪಂ.  ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಗೌಸ್ ಪೀರ್, ಗುತ್ತಿಗೆದಾರ ಮೋಹನ್, ಸಿಡಿಸಿ ಸದಸ್ಯರಾದ ಓಮಣ್ಣ, ಹಟ್ಟಿ ತಿಪ್ಪೇಸ್ವಾಮಿ, ಸಾಹಿತಿ ಡಿ.ಸಿ. ಮಲ್ಲಿಕಾರ್ಜುನ್, ಪ್ರಾಧ್ಯಾಪಕರಾದ ಸತೀಶ್, ಸಲ್ಮಾ ತಾಜ್, ಚೈತ್ರಾ, ಅಮರೇಶ್ ಮುಂತಾದವರು ಇದ್ದರು.

error: Content is protected !!