`ಸುರಕ್ಷಾ ದೀಪಾವಳಿ’ ಆಚರಣೆಗೆ ಪ್ರಮಾಣ ವಚನ

`ಸುರಕ್ಷಾ ದೀಪಾವಳಿ’ ಆಚರಣೆಗೆ ಪ್ರಮಾಣ ವಚನ

ದಾವಣಗೆರೆ, ನ. 12 – ಪರಿಸರ ಸಂರಕ್ಷಣಾ ವೇದಿಕೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಅಮೃತ ಯುವಕರ ಸಂಘದ ಆಶ್ರಯದಲ್ಲಿ ನಗರದ ಸಿದ್ದಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ಸುರಕ್ಷಾ ದೀಪಾವಳಿ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ಮಾಲಿನ್ಯ ರಹಿತ ದೀಪಾವಳಿ ಆಚರಿಸಲು ಪ್ರಮಾಣ ವಚನ  ಸ್ವೀಕರಿಸಿದರು. 

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ್ ಮಾತನಾಡಿ, ದೀಪಗಳ ಹಬ್ಬ ದೀಪಾವಳಿಯನ್ನು ಸಡಗರದಿಂದ ಆಚರಿಸೋಣ, ದೀಪಾವಳಿ ಹಬ್ಬದಲ್ಲಿ ಅಪಾಯಕಾರಿಯಲ್ಲದ ಕಡಿಮೆ ಶಬ್ದ ಮಾಡುವ, ಜೀವಹಾನಿ ಮಾಡದಂತಹ, ಪ್ರಾಣಿ, ಪಕ್ಷಿ, ಸಕಲ ಜೀವಿಗಳ ಬದುಕಿಗೆ ತೊಂದರೆಯಾಗದಂತೆ ಹಸಿರು ಪಟಾಕಿ ಬಳಸೋಣ, ದೀಪವಾಳಿ ಕೇವಲ ಪಟಾಕಿ ಹಬ್ಬವಲ್ಲ. ಎಲ್ಲರ ಮನ ಮನೆ ಬೆಳಗುವ ಹಬ್ಬ, ದೀಪದಿಂದ ದೀಪ ಹಚ್ಚುವ ಮೂಲಕ ನಾವು ಹಬ್ಬವನ್ನು ಆಚರಿಸೋಣ. ಪಟಾಕಿ ಸಿಡಿಸುವುದರಿಂದ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಮತ್ತು ಜೀವ ಹಾನಿಯಂತಹ ಪ್ರಕರಣಗಳು ಕಂಡು ಬರುತ್ತಿವೆ. ಆದ್ದರಿಂದ ಮಾಲಿನ್ಯ ರಹಿತ ಹಬ್ಬದ ಆಚರಣೆಗೆ ಕರೆ ನೀಡಿದರು.  

ಸಿದ್ದಗಂಗಾ ವಿದ್ಯಾಸಂಸ್ಥೆಯ ಜಸ್ಟಿನಾ ಡಿಸೋಜ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರುನಾಡು ಕನ್ನಡ ಸೇನೆ ಅಧ್ಯಕ್ಷ ಕೆ.ಟಿ. ಗೋಪಾಲಗೌಡ, ಅಮೃತ ಯುವಕರ ಸಂಘದ ಅಧ್ಯಕ್ಷ ಆರ್.ಬಿ. ಹನುಮಂತಪ್ಪ, ಪರಿಸರ ಸಂರಕ್ಷಣಾ ವೇದಿಕೆಯ ಗಿರೀಶ್ ದೇವರಮನೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕಾರ್ಯದರ್ಶಿ ಗುರುಸಿದ್ದಸ್ವಾಮಿ, ಸಾಮಾಜಿಕ ಕಾರ್ಯಕರ್ತ ನಾಗರಾಜ ಸುರ್ವೆ, ಮಾರುತಿ, ಪ್ರಸನ್ನ ಬೆಳಕೆರೆ ಸೇರಿದಂತೆ ಇತರರು ಭಾಗವಹಿಸಿದ್ದರು. 

error: Content is protected !!