ಏಕರೂಪ ಶಿಕ್ಷಣದಿಂದ ಸರ್ಕಾರಿ ಶಾಲೆಗಳಿಗೆ ಮಾನ್ಯತೆ ಸಾಧ್ಯ

ಏಕರೂಪ ಶಿಕ್ಷಣದಿಂದ ಸರ್ಕಾರಿ ಶಾಲೆಗಳಿಗೆ ಮಾನ್ಯತೆ ಸಾಧ್ಯ

ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾರ್ಯಕ್ರಮ ಉದ್ಘಾಟನೆಯಲ್ಲಿ ಶಾಸಕ ಬಿ.ಪಿ. ಹರೀಶ್ ಅಭಿಮತ

ಹರಿಹರ, ನ. 12 – ಸರ್ಕಾರಿ ಮತ್ತು ಸರ್ಕಾರದ ಅನುದಾನಿತ ಖಾಸಗಿ ಶಾಲಾ-ಕಾಲೇಜ್‌ಗಳಲ್ಲಿ ಏಕರೂಪದ ಶಿಕ್ಷಣ ದೊರೆಯುವಂತಾದಲ್ಲಿ ಮಾತ್ರ, ಸರ್ಕಾರಿ ಶಾಲಾ-ಕಾಲೇಜುಗಳಿಗೆ ಹೆಚ್ಚಿನ ಮಾನ್ಯತೆ ದೊರೆಯಲು ಸಾಧ್ಯ. ಆದರೆ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಇಂದು ಅನೇಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುವುದರಿಂದ, ಸರ್ಕಾರಿ ಶಾಲೆಗಳಿಗೆ ಇಂದು ಅಷ್ಟೊಂದು ಮಾನ್ಯತೆ ಸಿಗುತ್ತಿಲ್ಲವೆಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಹರಿಹರ) ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾ- ಭವನದಲ್ಲಿ ಶನಿವಾರ ಏರ್ಪಡಿಸಿದ್ದ  ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೆಡ್‍ಕ್ರಾಸ್ ಚಟುವಟಿಕೆಗಳ ಉದ್ಘಾಟನೆ ಹಾಗೂ ಕಾಲೇಜ್‌ನಿಂದ ಹೊರ ತಂದಿರುವ ಹರಿಹರ ದೀವಿಗೆ-3 ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪದವಿ ಪಡೆದ ಹೆಣ್ಣುಮಕ್ಕಳು ಜೀವ ನದಲ್ಲಿ ಯಶಸ್ಸು ಪಡೆಯಲು ಒನಕೆ ಓಬವ್ವ ನಂತೆ ಹೊರಾಡುವಂತಹ ಗುಣಗಳನ್ನು ಬೆಳೆಸಿ ಕೊಳ್ಳಬೇಕೆಂದು ಶಾಸಕರು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್. ಬಿಲ್ಲಪ್ಪ ಮಾತನಾಡಿ,   ನಮ್ಮ ಸಮಾಜ ಮೌಢ್ಯತೆಯಿಂದ ತುಂಬಿದೆ. ಆಧಾರ ರಹಿತವಾದ ನಂಬಿಕೆ, ಗಾಳಿ ಮಾತುಗಳಿಂದ ಗಲಭೆಗಳು, ಶಾಂತಿ ರಹಿತವಾದ ವಾತಾವರಣ ಉಂಟಾಗುತ್ತದೆ. ಸತ್ಯದ ಜೊತೆಯಲ್ಲಿರುವುದು ತುಂಬಾ ಕಷ್ಟವಾಗಿದೆ.   

ಹಿಂದಿನ ಕಾಲದಲ್ಲಿ ದೇವರನ್ನು ನಂಬುತ್ತಿದ್ದರು, ಆದರೆ ಇಂದು ದೇವರನ್ನು ನಂಬುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಸೂರ್ಯ ಲೋಕ, ಚಂದ್ರ ಲೋಕಕ್ಕೆಲ್ಲಾ ಹೋಗಲು ಮಾನವ ಮುಂದಾಗಿದ್ದಾನೆ. ಗುಣಮಟ್ಟದ ಪದವಿಯನ್ನು ವಿದ್ಯಾರ್ಥಿಗಳು ಪಡೆದಲ್ಲಿ ಮಾತ್ರ ಜಾತೀಯತೆಯ ಭಾವನೆಗಳು ದೂರಾಗಲು ಸಾಧ್ಯ. ಎಷ್ಟು ಪದವಿ ಪಡೆದಿದ್ದೇವೆ ಎಂಬುದು ಮುಖ್ಯವಲ್ಲ. ನಡವಳಿಕೆ ಮತ್ತು ಏಕಾಗ್ರತೆ ಶಿಕ್ಷಣದ ಮಹತ್ವವನ್ನು ಎತ್ತಿ ತೋರುತ್ತದೆ ಎಂದು ಹೇಳಿದರು. 

ಗುಣಮಟ್ಟದ ಶಿಕ್ಷಣವನ್ನು ಪಡೆದಲ್ಲಿ ಮಾತ್ರ, ದೇಶ ಅವನತಿಯ ಅಂಚಿಗೆ ಹೋಗುವುದಿಲ್ಲ. ಪಂಚ ಭೂತಗಳಿಂದ ಒಳ್ಳೆಯ ಆರೋಗ್ಯ ಸಿಗಲು ಸಾಧ್ಯ. ಆದ್ದರಿಂದ ಗಿಡ-ಮರಗಳನ್ನು ಬೆಳೆಸಲು ಮಕ್ಕಳು ಮುಂದಾಗಬೇಕೆಂದು ಹೇಳಿದರು.

ಕಾಲೇಜ್‌ನ ಪ್ರಾಂಶುಪಾಲ ಪ್ರೊ.ಹೆಚ್. ವಿರುಪಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು. 

ಉಪನ್ಯಾಸಕ ಡಾ. ಎಂ. ಕುಮಾರ, ಡಾ. ಸಿ. ಚಂದ್ರಶೇಖರ, ಡಾ. ಬಿ.ಕೆ. ಮಂಜುನಾಥ, ಡಾ. ಹೆಚ್.ಪಿ. ಅನಂತನಾಗ್, ಡಾ. ಎಂ.ಎಸ್. ಗೌರಮ್ಮ, ಡಾ. ಜಿ.ಎನ್. ದ್ರಾಕ್ಷಾಯಿಣಿ, ಮಂಜುನಾಥ ನರಸಗೊಂಡರ, ಜಿ.ಎಸ್. ಸುರೇಶ್, ಡಾ. ದೂಪದಹಳ್ಳಿ ಬಸವರಾಜ, ಡಾ. ಕೆ.ಎ. ಬಾಬು, ಹನುಮಂತಪ್ಪ ಉಪಸ್ಥಿತರಿದ್ದರು.  

error: Content is protected !!