ದಾವಣಗೆರೆ, ನ.8 – ಚನ್ನಗಿರಿಯಲ್ಲಿ ಮನೆಕಳ್ಳತನ ಪ್ರಕರಣ ಪತ್ತೆ ಹಚ್ಚಿರುವ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಚನ್ನಗಿರಿ ವಡ್ನಾಳ್ ರಾಜಣ್ಣ ಬಡಾವಣೆಯ ಮೊಹಮ್ಮದ್ ಗೌಸ್ ಎಸ್. (32) ಬಂಧಿತ ಆರೋಪಿಯಾಗಿದ್ದು, ಈತನಿಂದ 4.50 ಲಕ್ಷ ರೂ. ಬೆಲೆ ಬಾಳುವ 89.52 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಆರೋಪಿಯ ಮೇಲೆ ಚನ್ನಗಿರಿ ಪೊಲೀಸ್ ಠಾಣೆ ಹಾಗೂ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಠಾಣೆ ಹಾಗೂ ಚಿತ್ರದುರ್ಗ ನಗರ ಠಾಣೆಯಲ್ಲೂ ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚನ್ನಗಿರಿ ನಗರದ ಕಾಳಮ್ಮನ ಬೀದಿ ಮಂಡಕ್ಕಿ ವ್ಯಾಪಾರಿ ಶ್ರೀಮತಿ ಜ್ಯೋತಿ ಅವರು ಎಂದಿನಂತೆ ಮಂಡಕ್ಕಿ-ಬೋಂಡಾ ವ್ಯಾಪಾರಕ್ಕೆಂದು ಮನೆಗೆ ಬೀಗ ಹಾಕಿಕೊಂಡು ವ್ಯಾಪಾರಕ್ಕೆ ಹೋದ ಸಮಯದಲ್ಲಿ ಕಳ್ಳರು ಬೀಗ ಮುರಿದು ಬೀರುವಿನಲ್ಲಿದ್ದ 4.61 ಲಕ್ಷ ರೂ. ಬೆಲೆಯ 132 ಗ್ರಾಂ. ಬಂಗಾರದ ಒಡವೆ, 15 ಸಾವಿರ ರೂ. ಬೆಲೆಯ 250 ಗ್ರಾ.ಂ ಬೆಳ್ಳಿ ಸಾಮಾನು ಹಾಗೂ 1 ಲಕ್ಷ ರೂ. ನಗದು ಹಣ ಕಳ್ಳತನ ಮಾಡಿ ಕೊಂಡು ಹೋಗಿದ್ದಾರೆ ಎಂದು ಕಳೆದ ಅ.14ರಂದು ಚನ್ನಗಿರಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆರೋಪಿಯನ್ನು ಪತ್ತೆ ಮಾಡುವಲ್ಲಿ ಚನ್ನಗಿರಿ ಉಪವಿಭಾಗದ ಡಿವೈಎಸ್ಪಿ ಪ್ರಶಾಂತ್ ಜಿ ಮುನ್ನೋಳಿ, ಪೊಲೀಸ್ ಇನ್ಸ್‍ಪೆಕ್ಟರ್ ನಿರಂಜನ ಬಿ, ಪಿ.ಎಸ್.ಐ. ಮಂಜುನಾಥ, ಎಸ್. ಕಲ್ಲೇದವರ್, ಎ.ಎಸ್.ಐ. ಶಶಿಧರ್ ಮತ್ತು ಸಿಬ್ಬಂದಿಯವರಾದ, ರುದ್ರೇಶ್, ಬೀರೇಶ್ ಪುಟ್ಟಕ್ಕನವರ್, ನರೇಂದ್ರ ಸ್ವಾಮಿ, ಶ್ರೀನಿವಾಸಮೂರ್ತಿ, ರಮೇಶ್, ರಂಗಪ್ಪ, ರೇವಣಸಿದ್ದಪ್ಪ ಶ್ರಮಿಸಿದ್ದಾರೆ.