ಹರಿಹರ: `ಜಾಗೃತಿ ಅರಿವು’ ಸಪ್ತಾಹ ಕಾರ್ಯಕ್ರಮದಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪೂರೆ
ಹರಿಹರ, ನ. 8- ನಾನು ಶ್ರೀಮಂತ ಆಗಬೇಕು ಎನ್ನುವ ಮನೋಭಾವ ಇಟ್ಟುಕೊಂಡು, ದುರಾಸೆಗೆ ಬಲಿಯಾಗುವುದರ ಬದಲು, ಬರುವ ಸಂಬಳದಲ್ಲಿ ತೃಪ್ತಿ ಪಡೆಯುವುದು ನೌಕರರ ಮೂಲ ಮಂತ್ರವಾದಾಗ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿದೆ ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪೂರೆ ಅಭಿಪ್ರಾಯ ಪಟ್ಟರು.
ನಗರದ ಗುರು ಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ದಾವಣಗೆರೆ ಲೋಕಾಯುಕ್ತ ಘಟಕ, ತಾಲ್ಲೂಕು ಆಡಳಿತ ಮತ್ತು ಸರ್ಕಾರಿ ನೌಕರರ ಸಂಘದ ಸಹಯೋಗದೊಂದಿಗೆ ನಡೆದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ನಿಯಮಾನುಸಾರ ಕಾನೂನು ಬದ್ದವಾಗಿ ಕರ್ತವ್ಯ ನಿರ್ವಹಣೆ ಮಾಡುವುದಕ್ಕೆ ಮೊದಲ ಆದ್ಯತೆ ನೀಡಿದಾಗ ಮತ್ತು ಆಡಳಿತವನ್ನು ಪಾರದರ್ಶಕತೆಯಿಂದ ನಿರ್ವಹಣೆ ಮಾಡಿದಾಗ ಹಾಗೂ ನಾನು ಪಡೆದುಕೊಂಡ ಹುದ್ದೆಯನ್ನು ಶಿಸ್ತು ಬದ್ಧವಾಗಿ ಸಮಾಜಕ್ಕೆ ಒಳ್ಳೆಯದು ಆಗಬೇಕು ಎನ್ನುವ ದೃಷ್ಟಿಯಿಂದ ಕರ್ತವ್ಯ ಪೂರೈಸಲು ಮುಂದಾದರೆ ಅಕ್ರಮ ಮತ್ತು ಭ್ರಷ್ಟಾಚಾರದ ಸುಳಿಗೆ ಸಿಲುಕುವ ಸಾಧ್ಯತೆ ಇರುವುದಿಲ್ಲ ಎಂದು ಹೇಳಿದರು.
ಕರ್ತವ್ಯವನ್ನು ಮಾಡುವಾಗ ಅಶಿಸ್ತು, ಲಂಚ ವನ್ನು ಪಡೆಯುವುದು, ವಿಳಂಬ ಮಾಡುವುದನ್ನು ತಪ್ಪಿಸಲು 2018 ರಲ್ಲಿ ಲೋಕಾಯುಕ್ತ ಭ್ರಷ್ಟಾಚಾರ ನಿಗ್ರಹ ಕಾನೂನು ಜಾರಿಗೆ ತರಲಾಯಿತು. ಕರ್ತವ್ಯದಲ್ಲಿ ಆಶಿಸ್ತು, ಲಂಚವನ್ನು ಪಡೆಯು ವುದು, ವಿಳಂಬ ನೀತಿಗಳಿಗೆ ಕಡಿವಾಣ ಹಾಕಿ ಕೊಳ್ಳುವ ಮನೋಭಾವ, ಮನಸ್ಥಿತಿಯನ್ನು ನೌಕರರು ಹೊಂದಿದಾಗ, ಕೆಟ್ಟ ಕೆಲಸಗಳು ತನ್ನಿಂದ ತಾನೇ ಕಡಿಮೆ ಆಗುತ್ತವೆ ಮತ್ತು ಸಮಾಜಕ್ಕೆ ಕೆಟ್ಟ ಸಂದೇಶಗಳು ಹೋಗುವುದು ತಪ್ಪುತ್ತದೆ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಎಂ. ಕರೆಣ್ಣವರ ಮಾತನಾಡಿ, ಬಾಲ್ಯದಲ್ಲಿ ಮಕ್ಕಳಿಗೆ, ಶಾಲೆಯಲ್ಲಿ ಮತ್ತು ಮನೆಯಲ್ಲಿ ಉತ್ತಮವಾದ ಸಂಸ್ಕಾರವನ್ನು ಕೊಟ್ಟರೆ ಮುಂದಿನ ದಿನಗಳಲ್ಲಿ ಅವರು ತಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಹಾಗೂ ಅವರು ಭ್ರಷ್ಟಾಚಾರದ ಸುಳಿಗೆ ಸಿಲುಕುವ ಪರಿಸ್ಥಿತಿ ನಿರ್ಮಾಣ ಆಗುವುದಿಲ್ಲ ಎಂದು ತಿಳಿಸಿದರು.
ಕಾಲ ಬಹಳಷ್ಟು ಬದಲಾವಣೆ ಹಾದಿಯಲ್ಲಿ ಸಾಗುತ್ತಿದ್ದು, ಅದಕ್ಕೆ ತಕ್ಕಂತೆ ನಮ್ಮಲ್ಲೂ ಕೂಡ ಬದಲಾವಣೆ ಮಾಡಿಕೊಳ್ಳದೇ ಹೋದರೆ ಅನಾಹುತ ಸಂಭವಿಸುತ್ತವೆ. ಸರ್ಕಾರದ ಕೆ.ಸಿ.ಎಸ್.ಆರ್. ನಿಯಮಾನು ಸಾರ ಕರ್ತವ್ಯವನ್ನು ನಿರ್ವಹಣೆ ಮಾಡಿದಾಗ, ಯಾವುದೇ ರೀತಿಯ ಸಮಸ್ಯೆಗಳು ಉಲ್ಬಣಗೊಳ್ಳುವುದಿಲ್ಲ. ಲಂಚವನ್ನು ಪಡೆಯುವುದು ಎಷ್ಟು ತಪ್ಪೋ ಹಾಗೆಯೇ ಅದನ್ನು ಕೊಡುವುದೂ ಅಪರಾಧವಾಗಿದೆ. ಕೆಲವು ವ್ಯಕ್ತಿಗಳ ತಪ್ಪು ಗ್ರಹಿಕೆ ಯಿಂದ ಅನಾಹುತಗಳಾಗುತ್ತವೆ. ಹಾಗಾಗಿ ಬಹಳಷ್ಟು ಶಿಸ್ತು ಬದ್ಧವಾಗಿ ಕರ್ತವ್ಯವನ್ನು ಪೂರೈಸಲು ಮುಂದಾಗುವಂತೆ ಹೇಳಿದರು.
ತಹಶೀಲ್ದಾರ್ ಪೃಥ್ವಿ ಸಾನಿಕಂ ಮಾತನಾಡಿ, ಸಾರ್ವಜನಿಕರು ತಮ್ಮ ಅರ್ಜಿಯನ್ನು ಕಚೇರಿಗೆ ತೆಗೆದುಕೊಂಡು ಬಂದಾಗ, ಸಿಬ್ಬಂದಿ ಅವುಗಳನ್ನು ತ್ವರಿತವಾಗಿ ಮಾಡಿದಾಗ ಸಮಸ್ಯೆಗಳು ಬರುವುದಿಲ್ಲ ಮತ್ತು ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ಶಿಸ್ತು ಬದ್ದವಾಗಿ ಕಾನೂನು ಪ್ರಕಾರ, ನಿರ್ಭೀತಿಯಿಂದ ಮಾಡಿದಾಗ ಭ್ರಷ್ಟಾಚಾರದ ಬಗ್ಗೆ ಆತಂಕವೂ ಇರುವುದಿಲ್ಲ ಎಂದು ಹೇಳಿದರು.
ಸಮಾರಂಭವನ್ನು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೀರೇಶ್ ಎಸ್.ಒಡೇನಪುರ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಇಓ ಹನುಮಂತಪ್ಪ, ತಾಪಂ ಪ್ರಭಾರಿ ಇಓ ರಾಮಕೃಷ್ಣ, ಪೌರಾಯುಕ್ತ ಐಗೂರು ಬಸವರಾಜ್, ಪಿಎಸ್ಐ ಪ್ರಸನ್ನ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೆ. ಭೂಮೇಶ್, ರಾಜು ಸಿಪಿಐ, ಲೋಕಾಯುಕ್ತ ಪಿಎಸ್ಐ ಪ್ರಭು ಸೂರಿನ, ರಾಷ್ಟ್ರಪತಿ, ನೌಕರರ ಸಂಘದ ಗೌರವಾಧ್ಯಕ್ಷ ರೇವಣಸಿದ್ದಪ್ಪ ಅಂಗಡಿ, ಎಂ. ಉಮ್ಮಣ್ಣ, ಖಜಾಂಚಿ ಮಂಜುನಾಥ್, ಲೋಕೋಪಯೋಗಿ ಇಲಾಖೆ ಶಿವಮೂರ್ತಿ, ಕೃಷಿ ಇಲಾಖೆ ನಾರನಗೌಡ, ಕಾರ್ಮಿಕ ಇಲಾಖೆ ಕವಿತಾ ಮತ್ತು ಇತರರು ಹಾಜರಿದ್ದರು.