ಎ.ಆರ್.ಜಿ ಕಾಲೇಜಿನ ಕಾರ್ಯಕ್ರಮದಲ್ಲಿ ಡಾ. ಸುರೇಶ್ ಹನಗವಾಡಿ
ದಾವಣಗೆರೆ, ನ. 8 – ಒಬ್ಬ ವ್ಯಕ್ತಿಯ ರಕ್ತದಿಂದ ನಾಲ್ಕು ಜನರ ಜೀವವನ್ನು ಉಳಿಸಲು ಸಾಧ್ಯ. ರಕ್ತ ಇಲ್ಲವೆಂದರೆ ಜೀವವಿಲ್ಲ. ರಕ್ತ ನಮ್ಮ ದೇಹದಲ್ಲಿನ ಜೀವನದಿ. ರಕ್ತ ಹೀನರಿಗೆ ಸಮಯಕ್ಕೆ ಸರಿಯಾಗಿ ರಕ್ತ ಸಿಗದ ಕಾರಣ ಪ್ರತಿ ವರ್ಷ ಲೆಕ್ಕವಿಲ್ಲದಷ್ಟು ಜನರು ಸಾವನ್ನಪ್ಪುತ್ತಿದ್ದಾರೆ. ಜೀವಗಳನ್ನು ಉಳಿಸಲು ರಕ್ತದಾನವನ್ನು ಪ್ರೋತ್ಸಾಹಿಸಬೇಕಾಗಿದೆ ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ಸುರೇಶ್ ಹನಗವಾಡಿ ತಿಳಿಸಿದರು.
ಅವರು ಇಲ್ಲಿನ ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಎನ್ಸಿಸಿ ಯುವ ರೆಡ್ ಕ್ರಾಸ್ ಘಟಕ ಹಾಗೂ ಎಸ್.ಎಸ್.ಕೇರ್ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಲ್ಲಿ ಆರೋಗ್ಯ ಜಾಗೃತಿ ಮತ್ತು ರಕ್ತದಾನ ಮಹತ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಸ್ತ್ರ ಚಿಕಿತ್ಸೆಗೆ ಒಳಗಾದವರಿಗೆ ಹಾಗೂ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಹಾಗೂ ಗರ್ಭಿಣಿ ಸ್ತ್ರೀಯರಿಗೆ ಯಾವುದೇ ಪರಿಸ್ಥಿತಿಯಲ್ಲಿ ರಕ್ತದ ಅವಶ್ಯಕತೆ ಇರುತ್ತದೆ. ರಕ್ತದಾನ ಮಾಡಲು ಮನಸ್ಸು, ಸಾಮಾಜಿಕ ಬದ್ದತೆ ಇರಬೇಕು. ಪ್ರತಿಯೊಬ್ಬರು ರಕ್ತದಾನಕ್ಕೆ ಮುಂದಾಗಬೇಕು ಎಂದು ಅವರು ತಿಳಿಸಿದರು.
ಪ್ರಾಂಶುಪಾಲ ಡಾ. ಜಿ.ಬಿ.ಬೋರಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದರು.
ಎಸ್.ಎಸ್.ಕೇರ್ ಟ್ರಸ್ಟ್ನ ನೋಡಲ್ ಅಧಿಕಾರಿ ಡಾ. ಧನ್ಯಕುಮಾರ್, ಜೆ.ಜೆ.ಎಂ.ಎಂ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ಕೆ.ಕೆ. ಸುರೇಶ್, ಡಾ. ಜಗದೀಶ್ವರಿ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಮಲ್ಲಿಕಾರ್ಜುನಪ್ಪ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯ ಸ್ಥರಾದ ಪ್ರೊ. ಅನಿತಾಕುಮಾರಿ, ಪ್ರೊ. ಆನಂದ್, ಗ್ರಂಥಾಲಯ ವಿಭಾಗದ ಡಾ. ಚಮನ್ಸಾಬ್, ಅಧೀಕ್ಷಕರಾದ ಕರಿಬಸಪ್ಪ, ಕವಿತಾ ಪಾಟೀಲ, ಬೇಬಿ ಅಮೀನಾ, ಅಲಿಯಾ ಅಂಜುಂ, ಸೌಮ್ಯ ಆಚಾರ್ ಮೊದಲಾದವರು ಉಪಸ್ಥಿತರಿದ್ದರು. ಪ್ರೊ. ರಶ್ಮಿ ಸ್ವಾಗತಿಸಿ, ಪ್ರೊ. ರಮೇಶ ಪೂಜಾರ್ ವಂದಿಸಿ. ಡಾ.ಹೆಚ್.ಆರ್. ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.