ಹರಪನಹಳ್ಳಿ, ನ. 8 – ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೌಲಭ್ಯಗಳಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಜ್ಯ ಮಾಹಿತಿ ಹಕ್ಕು ಸಂಪನ್ಮೂಲ ವ್ಯಕ್ತಿ ಎ.ಎಂ.ಪಿ. ವಾಗೀಶ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ತಮ್ಮ ಪುತ್ರನ ಹೆಂಡತಿ (ಸೊಸೆ)ಗೆ ಹೆರಿಗೆಯಾದ ಹಿನ್ನೆಲೆಯಲ್ಲಿ ಆಸತ್ರೆಗೆ ಭೇಟಿ ನೀಡಿ ಸೊಸೆ ಹಾಗೂ ಮಗುವಿನ ಆರೋಗ್ಯ ವಿಚಾರಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು
ಸರ್ಕಾರಿ ಆಸ್ಪತ್ರೆ ಎಂದಾಕ್ಷಣ ಜನ ಮೂಗು ಮುರಿಯುವುದು ಹೆಚ್ಚು. ಆದರೆ ವಾಸ್ತವವಾಗಿ ನಾವು ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಗಮನ ಹರಿಸುವುದಿಲ್ಲ ಎಂದರು.
ಹರಪನಹಳ್ಳಿ ಸಾರ್ವಜನಿಕ ಆಸ್ಪತ್ರೆ ಕುರಿತು ನಾನು ಮಾಹಿತಿ ಪಡೆದಾಗ, ಇಲ್ಲಿ ಉತ್ತಮ ಸೌಲಭ್ಯ, ನುರಿತ ವೈದ್ಯರು ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ನನ್ನ ಸೊಸೆಯನ್ನು ಇಲ್ಲಿಯೇ ದಾಖಲಿಸಿ ಹೆರಿಗೆ ಮಾಡಿಸಿದೆ. ತಾಯಿ ಮತ್ತು ಮಗು ಸುರಕ್ಷಿತವಾಗಿ ದ್ದಾರೆ. ಆಸ್ಪತ್ರೆಗಾಗಿ ಲಕ್ಷಗಟ್ಟಲೇ ಖರ್ಚು ಮಾಡುವ ಬದಲು ಬಡವರು ಇಂತಹ ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯ ಪಡೆದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ನಿಲಯ ಮೇಲ್ವಿಚಾರಕ ಬಿ.ಎಚ್.ಚಂದ್ರಪ್ಪ, ಎನ್.ಜಿ. ಬಸವರಾಜ, ವೈದ್ಯ ಶಂಕರನಾಯ್ಕ್ ಇದ್ದರು.