ದಾವಣಗೆರೆ, ನ. 8 – ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಪಂಪಾಪತಿಯವರ ಹೆಸರು ನಾಮಕರಣ ಮಾಡುವ ಬಗ್ಗೆ ಬಿಜೆಪಿ ಹಾಗು ವಿವಿಧ ಸಂಘಟನೆಗಳಿಂದ ಜಿಲ್ಲಾಡಳಿತಕ್ಕೆ ಮತ್ತು ಸರ್ಕಾರಕ್ಕೆ ಒತ್ತಾಯ ಮಾಡುವಂತೆ ಆಗ್ರಹಿಸಿ ಎಐಟಿಯುಸಿ ಬಿಜೆಪಿ ಪಕ್ಷಕ್ಕೆ ಮನವಿ ಸಲ್ಲಿಸಿತು.
ನಗರದ ಅಶೋಕ ರಸ್ತೆಯಲ್ಲಿನ ಭಾರತೀಯ ಕಮ್ಯುನಿಸ್ಟ್ ಪಕ್ಷದ ಕಚೇರಿಯಿಂದ ಕೆ.ಬಿ.ಬಡಾವಣೆಯಲ್ಲಿನ ಭಾರತೀಯ ಜನತಾ ಪಕ್ಷದ ಕಚೇರಿಗೆ ತೆರಳಿ, ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ್ ಅವರಿಗೆ ಮನವಿ ಸಲ್ಲಿಸಿದರು.
ಬೆವರಿನ ಸಂಕೇತವಾಗಿದ್ದ ಪಂಪಾಪತಿ ಅವರು ನಗರದಲ್ಲಿನ ಬಡ ಕಾರ್ಮಿಕರ ಏಳಿಗೆಗಾಗಿ ಶ್ರಮಿಸುತ್ತಾ, ವಿರೋಧಿಗಳಿಂದ ಸಾಕಷ್ಟು ಬಾರಿ ಮಾರಣಾಂತಿಕ ದಾಳಿಗೆ ಒಳಗಾಗಿ ಶ್ರಮಜೀವಿ ಆಗಿದ್ದರು. ನಗರದಲ್ಲಿ 6 ಸಾವಿರ ಸಸಿಗಳನ್ನು ನೆಡುವುದರ ಮೂಲಕ, ಬಾತಿ ಕೆರೆಯನ್ನು ಶುದ್ದೀಕರಣಗೊಳಿಸಿ ನಗರಕ್ಕೆ ದಿನಕ್ಕೆ 2 ಬಾರಿ ಶುದ್ಧ ನೀರನ್ನು ಒದಗಿಸುವ ಜೊತೆಗೆ, ಒಳಚರಂಡಿ ಕಾಮಗಾರಿ, ರಸ್ತೆ ಅಗಲೀಕರಣ ಸೇರಿ ದಂತೆ ಅನೇಕ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಾ, ಆಶ್ರಯ ನಿರಾಶ್ರಿತರನ್ನು ಗುರುತಿಸಿ ಸುಮಾರು 11 ಬಡಾವಣೆಗಳನ್ನು ನಿರ್ಮಾಣ ಮಾಡಿದಂ ತಹ ಧೀಮಂತ ನಾಯಕ ಎಂದು ಹೇಳಿದರು.
ಅಂದಿನ ನಗರಸಭೆ ಆಡಳಿತಕ್ಕೆ ಅವಶ್ಯವಿರುವ ಡಿ-ಗ್ರೂಪ್ ನೌಕರರು, ಪೌರಕಾರ್ಮಿಕರು, ನೀರು ಸರಬರಾಜು ಕಾರ್ಮಿಕರು, ಎನ್.ಆರ್. ಗ್ಯಾಂಗ್, ಒಳಚರಂಡಿ ಕೆಲಸಗಳಿಗೆ ಅವಶ್ಯವಿರುವ ಸುಮಾರು 850 ಜನ ಕಾರ್ಮಿಕರನ್ನು ಏಕಕಾಲಕ್ಕೆ ನೇಮಕ ಮಾಡಿಕೊಳ್ಳುವುದರೊಂದಿಗೆ ಉತ್ತಮ ಆಡಳಿತ ನೀಡುವುದರೊಂದಿಗೆ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದು, ಅಂತಹ ವ್ಯಕ್ತಿಯ ಹೆಸರನ್ನು ಕೆಎಸ್ಆರ್ ಟಿಸಿಗೆ ಇಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ರಾಘವೇಂದ್ರ ನಾಯರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆವರಗೆರೆ ಹೆಚ್.ಜಿ.ಉಮೇಶ್, ಪಿ.ಕೆ.ಲಿಂಗರಾಜ್, ಭಜನೆ ಹನುಮಂತಪ್ಪ, ಭೀಮಾರೆಡ್ಡಿ, ಶಿವಕುಮಾರ್ ಡಿ.ಶೆಟ್ಟರ್, ವಿ.ಲಕ್ಷ್ಮಣ್, ಡಿ.ಷಣ್ಮುಗಂ, ಸುರೇಶ್ ಯರಗುಂಟೆ, ಎಸ್. ಮುರುಗೇಶ್ ಇತರರು ಇದ್ದರು.