ದಾವಣಗೆರೆ, ನ. 8 – ಭಕ್ತರು ದೇವಾಲಯಗಳಿಗೆ ನೀಡುವಂತಹ ಕಾಣಿಕೆಗಳು ಸದ್ಬಳಕೆಯಾದರೆ, ಭಕ್ತರ ಇಷ್ಟಾರ್ಥಗಳು ಈಡೇರಿದಂತೆ ಆಗಲಿದೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ನಗರದ ಕೊಂಡಜ್ಜಿ ರಸ್ತೆಯ ವಿನಾಯಕ ನಗರ ಬಡಾವಣೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಶಿರಡಿ ಸಾಯಿಬಾಬಾರವರ 105ನೇ ಪುಣ್ಯಾರಾಧನೆ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಕ್ತರು ತಮ್ಮ ಕಷ್ಟಕಾರ್ಪಣ್ಯಗಳನ್ನು ಈಡೇರಿಸಿಕೊಳ್ಳಲು ಭಗವಂತನ ಮೊರೆ ಹೋಗುತ್ತಾರೆ. ಅದು ಈಡೇರಿದಾಗ ತಮ್ಮ ಕೈಲಾದ ಸೇವೆಯನ್ನು ಕಾಣಿಕೆ ರೂಪದಲ್ಲಿ ಸಮರ್ಪಿಸುತ್ತಾರೆ. ಆಗ ದೇವಸ್ಥಾನ ಮಂಡಳಿಯವರು ಅದು ದುರುಪಯೋಗ ವಾಗದಂತೆ ನೋಡಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸಂಸ್ಥಾಪಕ ಗುರುಗಳಾದ ವೈದ್ಯ ಶ್ರೀ ಗುರುದೇವ ಸ್ವಾಮೀಜಿ ಮಾತನಾಡಿ, ಮನುಷ್ಯ ಧರ್ಮವಾಗಿದ್ದು, ಅದರ ಅರ್ಥ ತಿಳಿದು ಕಾಯಕ ನಿಷ್ಠೆ ಬೆಳೆಸಿಕೊಂಡರೆ ಅಂತವರಿಗೆ ಅಂತ್ಯದಲ್ಲಿ ಮೋಕ್ಷ ಸಿಗಲಿದೆ. ಜನರಲ್ಲಿ ಇಂದು ಭಾವನೆಯ ಕೊರತೆಯಿಂದ ಭಕ್ತಿ ಇಲ್ಲದಂತಾಗಿದ್ದು, ಮನುಷ್ಯ ಇಂದು ಅಹಂಕಾರದಲ್ಲಿ ಬೆಳೆಯುತ್ತಿದ್ದು, ಹಣ ಇದ್ದರೆ ಏನು ಬೇಕಾದರೂ ಗಳಿಸಬಹುದು ಎಂಬ ಭ್ರಮೆಯಲ್ಲಿದ್ದಾನೆ. ಹಣ ಹೇಗೆ ಬೇಕಾದರೂ ಗಳಿಸಬಹುದು, ಭಕ್ತಿ ಗಳಿಸುವುದು ಅಸಾಧ್ಯವೆಂದರು.
ಜೀವಿತಾವಧಿಯಲ್ಲಿ ತಾವು ದುಡಿದ ಹಣದಲ್ಲಿ ಸ್ವಲ್ಪ ಭಾಗವಾದರೂ ದಾನ- ಧರ್ಮದ ಮೂಲಕ ಸೇವೆ ಸಲ್ಲಿಸಿದರೆ, ಭಗವಂತನ ಕೃಪೆಗೆ ಪಾತ್ರರಾಗಿ ಸುಖ, ಶಾಂತಿ, ನೆಮ್ಮದಿಗೆ ದಾರಿಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ಎಲ್. ಡಿ. ಗೋಣೆಪ್ಪ, ಫಕೀರಪ್ಪ ಸುರ್ವೆ, ಬಿ.ಕೆ. ಉಚ್ಚೆಂಗಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಗೀತಾ ಚಂದ್ರಶೇಖರ್ ಆಗಮಿಸಿದ್ದರು. ಹಿರಿಯ ಪತ್ರಕರ್ತ ಎಸ್.ಬಿ. ಜಿನದತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸತೀಶ್ ರೇವಣಕರ್ ಸ್ವಾಗತಿಸಿದರೆ. ಕೆ.ಬಿ. ರಾಜು ಕಾರ್ಯಕ್ರಮ ನಿರೂಪಿಸಿದರು.