ವಾಲ್ಮೀಕಿ ಜಾತ್ರೆ : ಸಮುದಾಯವನ್ನು ಜಾಗೃತ ಗೊಳಿಸಿ ಸಂಘಟಿಸುವುದು ಜಾತ್ರೆಯ ಉದ್ದೇಶ

ವಾಲ್ಮೀಕಿ ಜಾತ್ರೆ : ಸಮುದಾಯವನ್ನು ಜಾಗೃತ ಗೊಳಿಸಿ ಸಂಘಟಿಸುವುದು ಜಾತ್ರೆಯ ಉದ್ದೇಶ

ಪೂರ್ವಬಾವಿ ಸಭೆಯಲ್ಲಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ 

ಮಲೇಬೆನ್ನೂರು, ನ. 7 – ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಿ, ಸಂಘಟಿಸುವುದು ವಾಲ್ಮೀಕಿ ಜಾತ್ರೆಯ ಉದ್ದೇಶವಾಗಿದೆ ಎಂದು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ಅವರು ಸೋಮವಾರ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಹಮ್ಮಿಕೊಂಡಿದ್ದ `ವಾಲ್ಮೀಕಿ ಜಾತ್ರಾ ಮಹೋತ್ಸವ – 2024′ ರ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜಾತ್ರೆ ಒಂದು ಧಾರ್ಮಿಕ ಪರಂಪರೆಯಾಗಿದ್ದರೂ, ಸಮುದಾಯದ ಜನರನ್ನು ಒಂದೆಡೆ ಸೇರಿಸಿ ಜಾಗೃತಿ ಮೂಡಿಸುವ ಮತ್ತು ಸಂಘಟನೆ ಮಾಡುವ ಉದ್ದೇಶ ಹೊಂದಿದೆ. 2024 ರ ಫೆ. 8 ಮತ್ತು 9 ರಂದು ರಾಜನಹಳ್ಳಿ ಮಠದ ಆವರಣದಲ್ಲಿ 6 ನೇ ವರ್ಷದ ವಾಲ್ಮೀಕಿ ಜಾತ್ರೆ ನಡೆಯಲಿದೆ ಎಂದರು.

ಈ ಹಿಂದಿನ ಜಾತ್ರಾ ಮಹೋತ್ಸವ ಸಮಿತಿಗೆ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಮಾಜಿ ಶಾಸಕ ಎಸ್.ವಿ. ರಾಮಚಂದ್ರಪ್ಪ. ಶಾಸಕ ಟಿ. ರಘುಮೂರ್ತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮುಂಬರುವ ಜಾತ್ರೆಗೆ ಸಚಿವ ಕೆ.ಎನ್. ರಾಜಣ್ಣ ಅಥವಾ ನಾಗೇಂದ್ರ ಅವರನ್ನು ನೇಮಿಸಬಹುದಾಗಿದೆ ಎಂದರು. 

ರಾಜ್ಯದಲ್ಲಿ ಸಮುದಾಯದ 18 ಶಾಸಕರು, ಇಬ್ಬರು ಸಂಸದರು, ವಿಧಾನ ಪರಿಷತ್ ಸದಸ್ಯರು ಸೇರಿ ಅನೇಕ ಮುಖಂಡರು ಇದ್ದಾರೆ. ಅವರೆಲ್ಲರ ಸಲಹೆ, ಸಹಕಾರ ಪಡೆಯಲಾಗುವುದು. ಜಾತ್ರೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಬೇಕಿದೆ. ಎಲ್ಲರೂ ಸಹಕಾರ ನೀಡಿದಲ್ಲಿ ಈ ಬಾರಿಯ ಜಾತ್ರೆಯನ್ನು ಐತಿಹಾಸಿಕ ಕ್ಷಣವಾಗಿಸಬಹುದು ಎಂದು ಸ್ವಾಮೀಜಿ ತಿಳಿಸಿದರು.  ಈ ವೇಳೆ ಅನೇಕರು ಜಾತ್ರೆಗೆ ಚಲನಚಿತ್ರ ನಟರನ್ನು ಕರೆಸಬಾರದು, ಅವರನ್ನು ಕರೆಸಿದರೆ ಜಾತ್ರೆಯ ಉದ್ದೇಶಕ್ಕೆ ದಕ್ಕೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು. 

ಮಠದ ಆಡಳಿತಾಧಿಕಾರಿ ಟಿ. ಓಬಳಪ್ಪ, ಮಠದ ಟ್ರಸ್ಟಿಗಳಾದ ಡಾ. ಜಿ. ರಂಗಯ್ಯ, ಬಿ. ವೀರಣ್ಣ, ನಲವಾಗಲು ನಾಗರಾಜಪ್ಪ, ಮಲ್ಲಪ್ಪ ಕೌಜಗೇರಿ, ಮಹೇಶ್, ಹರ್ತಿಕೋಟೆ ವೀರೇಂದ್ರ ಸಿಂಹ, ಜಂಬಯ್ಯ ನಾಯಕ, ಶಾಂತಾ ಸುರಪುರ, ಶಿವಮೊಗ್ಗ ಬಸವರಾಜ್, ಕೆ.ಬಿ. ಮಂಜಣ್ಣ, ಮುಖಂಡರಾದ ದಿನೇಶ್ ಬಾಬು, ಜಿಗಳಿ ರಂಗಪ್ಪ, ಮೆಣಸಿನಹಾಳ್ ಬಸವರಾಜ್, ಪಾರ್ವತಿ, ವಿಜಯಶ್ರೀ, ಗೌರಮ್ಮ, ರಾಜನಹಳ್ಳಿ ಭೀಮಣ್ಣ, ಹರಪನಹಳ್ಳಿ ಹುಚ್ಚoಗೆಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!