ಶಿಕ್ಷಣಕ್ಕೆ ಪ್ರೋತ್ಸಾಹಿಸಿದರೆ ಮಾತ್ರ ದಾರ್ಶನಿಕರ ಜಯಂತಿಗಳಿಗೆ ಅರ್ಥ

ಶಿಕ್ಷಣಕ್ಕೆ ಪ್ರೋತ್ಸಾಹಿಸಿದರೆ ಮಾತ್ರ  ದಾರ್ಶನಿಕರ ಜಯಂತಿಗಳಿಗೆ ಅರ್ಥ

ದಿಂಡದಳ್ಳಿ ಗ್ರಾಮದಲ್ಲಿನ ವಾಲ್ಮೀಕಿ ಜಯಂತ್ಯೋತ್ಸವ ದಲ್ಲಿ ಶಾಸಕ ಕೆ.ಎಸ್‌. ಬಸವಂತಪ್ಪ

ಮಾಯಕೊಂಡ, ನ. 7 –   ‘ಶಿಕ್ಷಣವನ್ನು ಪ್ರೋತ್ಸಾಹಿಸುವ ಮತ್ತು ಬಡವರಿಗೆ ನೆರವಾಗುವ  ಮೂಲಕ ದಾರ್ಶನಿಕರ ಜಯಂತಿ ಆಚರಿಸುವದರಿಂದ  ಅವರಿಗೆ ನಿಜವಾಗಿ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಅಭಿಪ್ರಾಯಪಟ್ಟರು.

ತಾಲ್ಲೂಕಿನ ದಿಂಡದಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ವಾಲ್ಮೀಕಿ ಜಯಂತಿಯಲ್ಲಿ ಅವರು ಮಾತನಾಡಿದರು.

‘ಬಸವಣ್ಣ, ಕನಕದಾಸ, ಅಂಬೇಡ್ಕರ್, ರಾಯಣ್ಣ ನಂತಹ  ಮಹಾನ್ ದಾರ್ಶನಿಕರ ಜಯಂತಿಗಳನ್ನು ಕೇವಲ ಅದ್ದೂರಿಯಾಗಿ ಆಚರಿಸಿದರೆ ಸಾಲದು, ಅರ್ಥಪೂರ್ಣವಾಗಿ ಆಚರಿಸಬೇಕು.  ಶಿಕ್ಷಣವನ್ನು ಪ್ರೋತ್ಸಾಹಿಸಿ, ಬಡ ವಿದ್ಯಾರ್ಥಿಗಳಿಗೆ ನೆರವು ನೀಡಿದರೆ ನಿಜವಾದ ಅರ್ಥದಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಗುತ್ತದೆ. ನಾವು ವಾಲ್ಮೀಕಿ ಅಂಬೇಡ್ಕರ್ ರಷ್ಟು ಎತ್ತರಕ್ಕೆ ಬೆಳೆಯದಿದ್ದರೂ, ನಮ್ಮ ಅಕ್ಕಪಕ್ಕದ  ದುರ್ಬಲರಿಗೆ ಸಹಾಯ ಮಾಡಿ  ಸೌಲಭ್ಯ  ಒದಗಿಸಿದರೆ,  ಸಮಾಜ ಉದ್ದಾರವಾಗುವುದರಲ್ಲಿ ಸಂಶಯವಿಲ್ಲ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್, ಉಚಿತ ಅಕ್ಕಿ ನೀಡಿದ್ದಲ್ಲದೇ  ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ ತಿಂಗಳಿಗೆ ರೂ.2000 ಉಚಿತವಾಗಿ ನೀಡಿ ಜನಸಾಮಾನ್ಯರಿಗೆ ನೆರವಾಗಿದೆ. ಯುವಕರು ಗೃಹಲಕ್ಷ್ಮಿ ಯೋಜನೆ ಹಣ ತಲುಪದ  ಫಲಾನುಭವಿಗಳ ಪಟ್ಟಿ ತಂದರೆ ಸರಿಪಡಿಸುವ ವ್ಯವಸ್ಥೆ ಮಾಡುತ್ತೇನೆ.  ಗ್ರಾಮಕ್ಕೆ ಶುದ್ದ ಕುಡಿಯುವ ನೀರಿನ ಘಟಕ ಸೇರಿ ಹಲವು ಬೇಡಿಕೆ ಶೀಘ್ರ ಈಡೇರಿಸುವುದಾಗಿ ಅವರು ಭರವಸೆ ನೀಡಿದರು.

ಮುಖಂಡ ಮಂಜುನಾಥ್, ಗಣೇಶ್, ಪರಶುರಾಮ್, ಪ್ರಶಾಂತ್, ದೇವೇಂದ್ರಪ್ಪ ಕೃಷ್ಣಮೂರ್ತಿ, ನಾಗರಾಜ್, ಏಳುಕೋಟೆಪ್ಪ ಮತ್ತು, ವಾಲ್ಮೀಕಿ ಸಂಘದ ಸದಸ್ಯರು ಮತ್ತು ದಿಂಡದ ಹಳ್ಳಿಯ ಗ್ರಾಮಸ್ಥರು ಇದ್ದರು.

error: Content is protected !!