ಅಭಿವೃದ್ಧಿ ಕೆಲಸಗಳು ಕುಂಠಿತವಾಗಬಾರದು: ಶಾಸಕ ಬಿ. ದೇವೇಂದ್ರಪ್ಪ ಖಡಕ್ ಸೂಚನೆ

ಅಭಿವೃದ್ಧಿ ಕೆಲಸಗಳು ಕುಂಠಿತವಾಗಬಾರದು: ಶಾಸಕ ಬಿ. ದೇವೇಂದ್ರಪ್ಪ ಖಡಕ್ ಸೂಚನೆ

ಬಿ.ಪಿ.ಸುಭಾನ್

ಜಗಳೂರು, ನ.6- ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ತಲುಪಬೇಕು. ಅಭಿವೃದ್ಧಿ ಕೆಲಸಗಳು ಕುಂಠಿತವಾಗಬಾರದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಂದು ತಂಡವಾಗಿ ಕೆಲಸ ಮಾಡುವ ಮೂಲಕ ಬರಗಾಲ ಎದುರಿಸೋಣ ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.

ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ `ತ್ರೈಮಾಸಿಕ ಕೆಡಿಪಿ’ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಳೆ ಇಲ್ಲದೆ ಜನರು ಸಂಕಷ್ಟದಲ್ಲಿದ್ದಾರೆ, ಅವರಿಗೆ ಸ್ಪಂದಿಸಿ ಅಧಿಕಾರಿಗಳು ಕೆಲಸ ಮಾಡಬೇಕು.  ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳಿಗೆ ನನ್ನ ಪ್ರೋತ್ಸಾಹ ಇದೆ. ಆದರೆ ಸೋಮಾರಿಗಳಿಗೆ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳಿಗೆ ತಕ್ಕ ದಂಡನೆ ವಿಧಿಸಲು ನಾನು ಹಿಂದೆ-ಮುಂದೆ ನೋಡುವುದಿಲ್ಲ ಎಂದು ಶಾಸಕರು ಖಡಕ್ ಸೂಚನೆ ನೀಡಿದರು.

ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕುಡಿಯುವ ನೀರು, ಶಿಥಿಲಗೊಂಡ ಶಾಲಾ ಕಟ್ಟಡಗಳ ದುರಸ್ತಿ ಮತ್ತು ರಸ್ತೆಗಳ ಗುಂಡಿ ಮುಚ್ಚುವುದು ಹಾಗೂ ಉದ್ಯೋಗ ಖಾತ್ರಿ ಕೆಲಸಕ್ಕೆ ಆದ್ಯತೆ ನೀಡಬೇಕು. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.

ಮುಂಜಾಗೃತಾ ಕ್ರಮವಾಗಿ ಖಾಸಗಿ ಬೋರ್‌ವೆಲ್ ಮಾಲೀಕರೊಂದಿಗೆ ಚರ್ಚಿಸಿ ಬಾಡಿಗೆ ಆಧಾರದ ಮೇಲೆ ನೀರು ಪೂರೈಕೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು  ಆದೇಶ ನೀಡಿದರು.

ಗ್ರಾಪಂ ವ್ಯಾಪ್ತಿಯಲ್ಲಿ ಬೋರ್‌ಗಳ ದುರಸ್ತಿ ಹಾಗೂ ಖಾಸಗಿ ಬೋರ್‌ವೆಲ್ ಮಾಲೀಕರೊಂದಿಗೆ ಬಾಡಿಗೆ ರೂಪದಲ್ಲಿ ನೀರು ಪಡೆಯಲು ಈಗಾಗಲೇ   ಕ್ರಮ ವಹಿಸಲಾಗಿದೆ. ಇದಕ್ಕಾಗಿ ನಮ್ಮ ಪಿಡಿ ಖಾತೆಯಲ್ಲಿ ರೂ. 86.67 ಲಕ್ಷ ರೂ. ಅನುದಾನ ಲಭ್ಯವಿದೆ ಎಂದು ತಹಶೀಲ್ದಾರ್ ಸೈಯದ್ ಸಾಧಿಕ್ ಉಲ್ಲಾ ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಗೋಶಾಲೆ ಗಳನ್ನು ತೆರೆಯಲು ಮತ್ತು ಮೇವಿನ ಕೊರತೆಯನ್ನು ನೀಗಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಲಿಂಗರಾಜು ಅವರಿಗೆ ಶಾಸಕರು ಸೂಚನೆ ನೀಡಿದರು. ಇನ್ನು 16 ವಾರಗಳಿಗೆ ಆಗುವಷ್ಟು ಮೇವಿನ ಲಭ್ಯತೆ ಇದ್ದು, ರೈತರಿಗೆ  ಮೇವಿನ ಬೀಜದ ಕಿಟ್ ವಿತರಿಸಲು ಇಲಾಖೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಲಿಂಗರಾಜ್ ಮಾಹಿತಿ ನೀಡಿದರು.

ಗೃಹಲಕ್ಷ್ಮಿ ಯೋಜನೆಯಲ್ಲಿ ಕೆಲವು ಫಲಾನುಭವಿಗಳಿಗೆ ಹಣ ಪಾವತಿಯಾಗದ ಕಾರಣ ಗೊಂದಲ ಸೃಷ್ಟಿಸುತ್ತಿರುವ ಬಗ್ಗೆ  ಜನರಿಗೆ ಸ್ಪಷ್ಟ ಹಾಗೂ ನಿಖರ ಮಾಹಿತಿ ನೀಡಿ ಸರಿಪಡಿಸಬೇಕೆಂದು ಶಾಸಕರು ಸೂಚನೆ ನೀಡಿದರು. 

39 ಸಾವಿರ ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು 37,247 ಜನ ಫಲಾನುಭವಿ ಗಳಿಗೆ ಈಗಾಗಲೇ ಹಣ ಪಾವತಿಯಾಗಿದೆ. ಆಧಾರ್ ಲಿಂಕ್ ಆಗದೇ ಇರುವ ಮತ್ತು ಇಕೆವೈಸಿ ಮತ್ತು ಹೆಸರು ಕೆಲ ತಾಂತ್ರಿಕ ತೊಂದರೆಗಳಿರುವ ಫಲಾನುಭವಿಗಳಿಗೆ ಹಣ ಪಾವತಿ ಆಗಿಲ್ಲ. ಅವರಿಗೆ ಸೂಕ್ತ ಮಾಹಿತಿಯನ್ನು  ನೀಡಲಾಗುವುದು ಎಂದು ಸಿಡಿಪಿಓ ಬೀರೇಂದ್ರ ಕುಮಾರ್ ಸಭೆಗೆ ತಿಳಿಸಿದರು.

ಬ್ಯಾಂಕಿನವರು ಖಾತೆಯಲ್ಲಿ ಇರುವ ಸಣ್ಣ ಪುಟ್ಟ ಲೋಪದೋಷಗಳನ್ನು ಸರಿಪಡಿಸಲು ಹಾಗೂ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಲು ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ, ಕ್ರಮ ಕೈಗೊಳ್ಳಲು ತಹಶೀಲ್ದಾರ್ ಅವರಿಗೆ ಶಾಸಕರು ಸೂಚನೆ ನೀಡಿದರು.

ಬರದ ಹಿನ್ನೆಲೆಯಲ್ಲಿ ಬೆಳೆ ಹಾನಿ ಆದವರಿಗೆ ಪರಿಹಾರ ನೀಡುವ ಬಗ್ಗೆ ಇಲಾಖೆಯು ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ನೀಡಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ  ಮಿಥುನ್ ಕಿಮಾವತ್, ತಾಲ್ಲೂಕಿನಲ್ಲಿ ಶೇ. 100ರಷ್ಟು ಬೆಳೆ ಹಾನಿಯಾಗಿದ್ದು ಎನ್‌ಡಿಆರ್‌ಎಫ್‌ ಕೇಂದ್ರದಿಂದ ರೂ. 8500 ಮತ್ತು ಎಸ್‌ಡಿಆರ್‌ಎಫ್‌ ರಾಜ್ಯದಿಂದ ರೂ. 5100  ಒಂದು ಹೆಕ್ಟೇರಿಗೆ 13600 ರೂ  ಪರಿಹಾರ ಸಿಗುವ ಸಂಭವವಿದ್ದು, ರೈತರಿಗೆ ಎಷ್ಟೇ ಜಮೀನಿದ್ದರೂ ಎರಡು ಹೆಕ್ಟೇರಿಗೆ ಮಾತ್ರ ಪರಿಹಾರ ಸಿಗಲಿದೆ. ಈ ಪರಿಹಾರ ಪಡೆಯಲು ಫಿಡ್‌ ಮಾಡಿಸುವುದು ಕಡ್ಡಾಯವಾಗಿರುತ್ತದೆ ಎಂದು ಮಾಹಿತಿ ನೀಡಿದರು.

ಅಕ್ರಮ ಮದ್ಯ ಮಾರಾಟ, ಶಾಸಕರ ಅಸಮಾ ಧಾನ: ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು, ಜೂಜಾಟ, ಮಟ್ಕಾ ದಂಧೆಗಳು ನಡೆಯುತ್ತಿರುವ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

ನನ್ನ ಸ್ವಗ್ರಾಮ ಚಿಕ್ಕಮ್ಮನಹಟ್ಟಿಯಲ್ಲಿ ನಾಲ್ಕಾರು ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾ ಗುತ್ತಿದೆ. ಅಬಕಾರಿ ಇಲಾಖೆಯವರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಬರ ಪರಿಸ್ಥಿತಿಯಲ್ಲಿ ಜನ ಸಂ ಕಷ್ಟದಲ್ಲಿದ್ದಾರೆ. ಜೂಜು, ಮಟ್ಕಾದಂತಹ ಚಟಗಳಿಗೆ ಬಲಿಯಾಗಿ ಗ್ರಾಮೀಣ ಪ್ರದೇಶದಲ್ಲಿ  ಕೆಟ್ಟ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಪೊಲೀಸರು ತಕ್ಷಣ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕೆಂದು ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀನಿವಾಸ್ ರಾವ್ ಅವರಿಗೆ ಶಾಸಕರು ಸೂಚನೆ ನೀಡಿದರು.

ಬಾಡಿಗೆ ಕಟ್ಟದ ಕಟ್ಟಡದಲ್ಲಿರುವ ಸರ್ಕಾರಿ ಕಚೇರಿಗಳು: ಬಾಡಿಗೆ ಕಟ್ಟಡದಲ್ಲಿರುವ ಸರ್ಕಾರಿ ಕಚೇರಿಗಳು ತಕ್ಷಣವೇ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಗೊಳ್ಳಬೇಕೆಂದು ಶಾಸಕರು ಖಡಕ್  ಸೂಚನೆ ನೀಡಿದರು. ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಸೇರಿದಂತೆ  ಖಾಸಗಿ ಕಟ್ಟಡದಲ್ಲಿರುವ ಕಚೇರಿಗಳು ತಕ್ಷಣವೇ ಪಟ್ಟಣ ಪಂಚಾಯಿತಿ ಕಟ್ಟಡಕ್ಕೆ, ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಗೊಳ್ಳಬೇಕು ಎಂದರು.

ಇದರಿಂದಾಗಿ ಸರ್ಕಾರಕ್ಕೆ ಉಳಿತಾಯವಾಗ ಲಿದೆ ಮತ್ತು ಪಟ್ಟಣ ಪಂಚಾಯಿತಿ ಆದಾಯವು ಬರಲಿದೆ. ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯ ಮಾಡದೆ ತಕ್ಷಣವೇ ಕಚೇರಿ ಸ್ಥಳಾಂತರಿಸಬೇಕೆಂದು ಶಾಸಕರು ಸೂಚನೆ ನೀಡಿದರು.

ಸಭೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕರಿಬಸಪ್ಪ, ತಹಶೀಲ್ದಾರ್ ಸೈಯದ್ ಸಾಧಿಕ್ ಉಲ್ಲಾ, ಸಿಪಿಐ ಶ್ರೀನಿವಾಸರಾವ್, ಮುಖ್ಯಾಧಿಕಾರಿ ಲೋಕನಾಯಕ್, ಗ್ರೇಡ್ 2 ತಹಶೀಲ್ದಾರ್ ಮಂಜಾನಂದ, ಗ್ರಾಮೀಣ ನೀರು, ನೈರ್ಮಲ್ಯ ಇಲಾಖೆ ಎಇಇ ಸಾದಿಕ್ಉಲ್ಲಾ, ಬಿಇಓ  ಹಾಲಮೂರ್ತಿ, ಬೆಸ್ಕಾಂ ಎಇಇ ಸುಧಾಮಣಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಲೋಹಿತ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ತೋಟಪ್ಪ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಎಇ ಇ ಶಿವಮೂರ್ತಿ, ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು ಮತ್ತು ಗ್ರಾಮ ಪಂಚಾಯತ್ ಪಿಡಿಒಗಳು ಸಭೆಯಲ್ಲಿ ಭಾಗವಹಿಸಿದ್ದರು.

error: Content is protected !!