ಎದೆ ಬಗೆದು ತೋರಿಸಬೇಕಾ, ನಾನು ಬಿಜೆಪಿಯಲ್ಲೇ ಇದ್ದೇನೆ

ಎದೆ ಬಗೆದು ತೋರಿಸಬೇಕಾ, ನಾನು ಬಿಜೆಪಿಯಲ್ಲೇ ಇದ್ದೇನೆ

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ

ಹೊನ್ನಾಳಿ, ನ.11- ನಾನು ಬಿಜೆಪಿಯಲ್ಲಿದ್ದೇನೆ ಎಂಬುದನ್ನು ಹನುಮಂತನ ರೀತಿ ಎದೆ ಬಗೆದು ತೋರಿಸಬೇಕಾ ? ನಾನು ಬಿಜೆಪಿಯಲ್ಲೇ ಇದ್ದೇನೆ. ಕಾಂಗ್ರೆಸ್‍ಗೆ ಹೋಗೋದಿಲ್ಲಾ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಹೊನ್ನಾಳಿ – ನ್ಯಾಮತಿ ಅವಳಿ ತಾಲ್ಲೂಕಿನ ಮಂಡಲದ ಅಧ್ಯಕ್ಷರ ನೇತೃತ್ವದಲ್ಲಿ ಹೆಚ್.ಕಡದಕಟ್ಟೆ, ಅರಬಗಟ್ಟೆ, ಸೊರಟೂರು, ಮಾದನಬಾವಿ ಗ್ರಾಮಗಳಲ್ಲಿ ಮೂರನೇ ದಿನದ ಬರ ಅಧ್ಯಯನ ಪ್ರವಾಸ ಮಾಡಿ, ರೈತರಿಂದ ಮಾಹಿತಿ ಪಡೆದು ಅವರು ಮಾತನಾಡಿದರು. 

ರಾಜ್ಯ ಸರ್ಕಾರ 223 ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಿದ್ದು, ಪರಿಹಾರ ಮಾತ್ರ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ ರೇಣುಕಾಚಾರ್ಯ, ಒಂದು ಎಕರೆಗೆ 25 ಸಾವಿರ ರೂ.ಯಂತೆ ಪರಿಹಾರ ನೀಡಬೇಕು. ಇಲ್ಲದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡ ಬೇಕಾಗುತ್ತದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕಳೆದ ಮೂರು ದಿನಗಳಿಂದ ಅವಳಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಬರ ಅಧ್ಯಯನ ನಡೆಸಿ, ರೈತರ ಸಮಸ್ಯೆಗಳನ್ನು ಆಲಿಸುತ್ತಿದ್ದು, ಈ ಬಗ್ಗೆ ವರದಿ ಸಿದ್ದ ಪಡಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ನೀಡಿ, ಅವಳಿ ತಾಲ್ಲೂಕುಗಳಿಗೆ ಆದಷ್ಟು ಬೇಗ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡುವುದಾಗಿ ತಿಳಿಸಿದರು.

2019 ರಲ್ಲಿ ನನಗೆ 15 ಜಿಲ್ಲೆಗಳ ಬರ ಅಧ್ಯಯನಕ್ಕೆ ಕೊಟ್ಟಿದ್ದು, ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿದ್ದೇನೆ. ಆದರೆ, ಇದೀಗ ನನ್ನನ್ನು ಬರ ಪ್ರವಾಸದ ಪಟ್ಟಿಯಿಂದ ಹೊರಗಿಟ್ಟಿದ್ದು. ನನ್ನ ಕಣ್ಣು, ಕೈ ಕಾಲುಗಳು ಬಿದ್ದೋಗಿದ್ದಾವೇಯೇ ? ಎಂದು ಪ್ರಶ್ನೆ ಮಾಡಿದರು. ನನ್ನನ್ನು ಹೊರಗಿಟ್ಟಿದ್ದು ಅದರಿಂದ ನನಗೇನು ನಷ್ಟವಿಲ್ಲ, ಇದರಿಂದ ಬಿಜೆಪಿ ನಷ್ಟ, ನಮ್ಮವರೇ ಪಟ್ಟಿಯಿಂದ ನನ್ನನ್ನು ಹೊರ ಇಟ್ಟಿದ್ದು ನಾನು ಇದಕ್ಕೆ ಬಗ್ಗೋಲ್ಲ ಜಗ್ಗೋಲ್ಲ ಕುಗ್ಗೋಲ್ಲಾ ಎಂದರು.

ಬರಪಟ್ಟಿ ಸಿದ್ದಪಡಿಸಿದವರು ದಾರ ಸೂಜಿಯಂತೆ ಕೆಲಸ ಮಾಡಬೇಕು. ಆದರೆ, ಕತ್ತರಿಯಾಗಿ ಕೆಲಸ ಮಾಡ ಬಾರದು ಎಂದು ಆಕ್ರೋಶ ವ್ಯಕ್ತ ಪಡಿಸಿದ ರೇಣುಕಾಚಾರ್ಯ, ನಾನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರುಗಳನ್ನು ಭೇಟಿ ಮಾಡಿದ್ದು, ಹೊನ್ನಾಳಿ – ನ್ಯಾಮತಿ  ಬರ ಪಟ್ಟಿಗೆ ಸೇರಿಸುವಂತೆ ಮನವಿ ಮಾಡಲು ಕೇಳಿದರೆ, ನಮ್ಮವರೇ ಶೇ. 90 ರಷ್ಟು ಕಾಂಗ್ರೆಸ್‍ಗೆ ಹೋಗಿದ್ದಾರೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಮೊನ್ನೆ ಅವರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದೀರಲ್ಲಾ, ನೀವು ಮ್ಯಾಚ್ ಪಿಕ್ಸಿಂಗ್ ಮಾಡಿಕೊಂಡಿದ್ದೀರಾ ? ಎಂದು ಪ್ರಶ್ನೆ ಮಾಡಿದರಲ್ಲದೇ, ಯಾವ ಕಾರಣಕ್ಕೆ ಪಟ್ಟಿಯಿಂದ ಹೊರ ಗಿಟ್ಟಿದ್ದಾರೆಂದು ಬಹಿರಂಗ ಪಡಿಸಬೇಕೆಂದರು.

ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸ್ವೀಕರ್ ಆಗಿದ್ದವರು ಅವರು ನನಗೆ ಆತ್ಮೀಯರು, ಅವರ ಬಗ್ಗೆ ನನಗೆ ಗೌರವವಿದೆ. ನನನ್ನು ಪಟ್ಟಿಯಿಂದ ಹೊರಗಿಟ್ಟಿದ್ದು, ನಾನು ಹಾರ ತುರಾಯಿ ಇಟ್ಟುಕೊಂಡು ಅವರಿಗೆ ಕಾಯ ಬೇಕಾ, ಹೊನ್ನಾಳಿಗೆ ಬರುತ್ತೇವೆ ತಾವು ಇರಬೇಕೆಂದು ನನಗೆ ಹರಿಹರ ಶಾಸಕರು, ಜಿಲ್ಲಾ ಕಾರ್ಯದರ್ಶಿ ಕರೆ ಮಾಡಿದ್ದರು, ನನ್ನನ್ನು ಪಟ್ಟಿಯಿಂದ ಬಿಟ್ಟಿದ್ದು ನಾನು ಹಮಾಲಿ ಮಾಡಲು ಇರಬೇಕಾ ಎಂದರು.

ನಾನು ಜನರ ಧ್ವನಿಯಾಗಿ ವಾಸ್ತವಾಂಶ ಮಾತನಾಡಿದ್ದೇನೆ. ನಾನು ಬಿಜೆಪಿ ವಿರುದ್ದ ಮಾತನಾಡಿಲ್ಲ. ಯಡಿಯೂರಪ್ಪ ಸಿಎಂ ಆಗಿ ಒಳ್ಳೆಯ ಆಡಳಿತ ನೀಡಿದ್ದರು. ಅವರನ್ನು ಇಳಿಸಿದ ಮೇಲೆ ಸಾಕಷ್ಟು ನಷ್ಟವಾಗಿದೆ. ಹಿರಿಯರು ಸಾಕಷ್ಟು ಜನರು ಪಕ್ಷ ಬಿಟ್ಟು ಹೋದರು, ಬೊಮ್ಮಾಯಿ ಅವರು ಸಿಎಂ ಆಗಿದ್ದರೂ ಸಹ ಅವರನ್ನು ಸ್ವಾತಂತ್ರ್ಯವಾಗಿ ಆಡಳಿತ ಮಾಡಲು ಬಿಡಲಿಲ್ಲಾ. ಯಡಿಯೂರಪ್ಪನವರನ್ನು ಇಳಿಸಿದ್ದು ತಪ್ಪು ಎಂದು ಘಂಟಾಘೋಷವಾಗಿ ಹೇಳಿದ್ದಕ್ಕೆ ಪಟ್ಟಿಯಿಂದ ಹೊರಗೆ ಇಟ್ಟಿದ್ದಾರೆ ಎಂದರು. 

ಚುನಾವಣೆ ಪೂರ್ವದಲ್ಲಿ ಬಿಜೆಪಿಗೆ 100 ಸ್ಥಾನ ಬರ ಬಾರದೆಂದು ಬಿಜೆಪಿ – ಜೆಡಿಎಸ್ ಪ್ಲಾನ್ ಮಾಡಿದ್ರು, ಬಿಜೆಪಿ – ಜೆಡಿಎಸ್ ಹೊಂದಾಣಿಕೆಯಲ್ಲಿ ಸಿಎಂ ಆಗಬೇಕೆಂದು ಕೆಲವರು ಹಗಲುಗನಸು ಕಾಣುತ್ತಿದ್ದರು. ಹಾಗಾಗೀ ಈಶ್ವರಪ್ಪ, ಜಗದೀಶ್ ಶೆಟ್ರು ಅವರನ್ನು ಮುಗಿಸಿದರೆಂದು ಆಕ್ರೋಶ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಜಿಲ್ಲಾ ಉಪಾಧ್ಯಕ್ಷ ನೆಲಹೊನ್ನೆ ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಅರಕೆರೆ ನಾಗರಾಜ್, ಜಿ.ಪಂ.ಮಾಜಿ ಉಪಾಧ್ಯಕ್ಷ ಸುರೇಂದ್ರನಾಯ್ಕ, ತಾ.ಪಂ. ಮಾಜಿ ಸದಸ್ಯರ ಹನುಮಂತಪ್ಪ, ಬಗರ್‍ಹುಕ್ಕುಂ ಕಮಿಟಿ ಮಾಜಿ ಅಧ್ಯಕ್ಷ ನಾಗರಾಜ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ರಮೇಶ್, ಎಪಿಎಂಸಿ ಸದಸ್ಯರ ಬೀರಪ್ಪ, ದಿಡಗೂರು ಪಾಲಾಕ್ಷಪ್ಪ, ಪಾಲಾಕ್ಷಪ್ಪ, ಪುರಸಭೆ ಮಾಜಿ ಅಧ್ಯಕ್ಷ ರಂಗನಾಥ್, ಸೇರಿದಂತೆ ಮುಖಂಡರುಗಳು, ಕಾರ್ಯಕರ್ತರು, ರೈತರಿದ್ದರು.

error: Content is protected !!