ಕಳಪೆ ಗುಣಮಟ್ಟದ ರಸ್ತೆ ದುರಸ್ತಿ ಕಾಮಗಾರಿ ಗುತ್ತಿಗೆದಾರನಿಗೆ ಶಾಸಕ ಬಸವಂತಪ್ಪ ತರಾಟೆ

ಕಳಪೆ ಗುಣಮಟ್ಟದ ರಸ್ತೆ ದುರಸ್ತಿ ಕಾಮಗಾರಿ ಗುತ್ತಿಗೆದಾರನಿಗೆ ಶಾಸಕ ಬಸವಂತಪ್ಪ ತರಾಟೆ

ದಾವಣಗೆರೆ, ನ. 5 – ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಗೆ ಡಾಂಬರು ಹಾಕಿ ದುರಸ್ತಿ ಮಾಡುವ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವುದನ್ನು ಕಣ್ಣಾರೆ ಕಂಡ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕೆಂಡಾಮಂಡಲರಾದರು.

ಆನಗೋಡು ಮತ್ತು ಅಣಜಿ ಗ್ರಾಮಗಳ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಗುಂಡಿಗಳು ಬಿದ್ದು ವಾಹನ ಸವಾರರಲ್ಲಿ ಜೀವ ಭಯ ಕಾಡುತ್ತಿತ್ತು. 

ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಗೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ  ಡಾಂಬರು ಹಾಕಿ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಕಾಮಗಾರಿ ನಡೆಸಲಾಗುತ್ತಿದೆ.

ಆದರೆ ರಸ್ತೆಯಲ್ಲಿರುವ ಮಣ್ಣು ತೆಗೆಯದೆ, ರಸ್ತೆಯಲ್ಲಿರುವ ಧೂಳು ತೆಗೆಯದೇ ಅದರ ಮೇಲೆಯೇ ಡಾಂಬರು ಹಾಕುವುದನ್ನು ಗಮನಿಸಿದ  ಗ್ರಾಮಸ್ಥರು ಶಾಸಕರಿಗೆ ಕೂಡಲೇ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಪರಿಶೀಲನೆ ನಡೆಸಿದರು.

ಈ ವೇಳೆ ಡಾಂಬರು ತುಂಬಿದ ಟ್ರ್ಯಾಕ್ಟರ್, ರೋಣಗಲ್ಲು, ಕಾರ್ಮಿಕರು ಬಿಟ್ಟರೆ ಸ್ಥಳದಲ್ಲಿ ಗುತ್ತಿಗೆದಾರ ಆಗಲೀ, ಮೇಸ್ತ್ರಿ  ಆಗಲೀ ಅಥವಾ  ಸಂಬಂಧಪಟ್ಟ ಇಂಜಿನಿಯರ್ ಆಗಲೀ ಇಲ್ಲ. ಕೇವಲ ಕಾರ್ಮಿಕರು ಮಾತ್ರ ಡಾಂಬರ್‌ ಹಾಕುತ್ತಿದ್ದಾರೆ. ಶಾಸಕರು ಬಂದ ಎಷ್ಟೋ ಹೊತ್ತಿಗೆ ಗುತ್ತಿಗೆದಾರ ಬಂದಿದ್ದಾನೆ. ರಸ್ತೆ ದುರಸ್ತಿ ಮಾಡುತ್ತಿದ್ದರೋ ಅಥವಾ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುತ್ತಿದ್ದರೋ. ಕಾಟಾಚಾರಕ್ಕಾಗಿ ಏಕೆ ಕಾಮಗಾರಿ ಮಾಡ್ತೀರಿ ? ಮಾಡಿದರೆ
ಸ್ವಲ್ಪ ದಿನವಾದರೂ ಬಾಳಿಕೆ ಬಂದು ರಸ್ತೆ  ಗುಣಮಟ್ಟದಿಂದ ಕೂಡಿರಬೇಕು. ಗುಣಮಟ್ಟ ಕಾಮಗಾರಿ ಮಾಡಲು ಆಗದಿದ್ದರೆ ಟೆಂಡರ್ ಪಡೆಯಬಾರದು ಎಂದು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.

error: Content is protected !!