ಮನೆ ಬಾಗಿಲಿಗೆ ನಿಮ್ಮ ಸೇವಕ ಅಭಿಯಾನ ಪುನರಾರಂಭ

ಮನೆ ಬಾಗಿಲಿಗೆ ನಿಮ್ಮ ಸೇವಕ ಅಭಿಯಾನ ಪುನರಾರಂಭ

ಕುಡಿವ ನೀರು ಮಿತವಾಗಿ ಬಳಸಿ: ಗಡಿಗುಡಾಳ್ ಮಂಜುನಾಥ್

ದಾವಣಗೆರೆ, ನ.5- ಎಂಸಿಸಿ `ಬಿ’ ಬ್ಲಾಕ್‌ ನಲ್ಲಿ `ಮನೆಯ ಬಾಗಿಲಿಗೆ ನಿಮ್ಮ ಸೇವಕ ಅಭಿ ಯಾನವನ್ನು’ ಮತ್ತೆ ಪುನಾರಾರಂಭಿಸಲಾಗಿದ್ದು, ಈ ಭಾಗದ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಅವರು ಮನೆ ಮನೆ ಬಾಗಿಲಿಗೆ ಹೋಗಿ ಸಮಸ್ಯೆಗಳನ್ನು ಆಲಿಸಿದರು. ಪ್ರತಿ ಭಾನುವಾರ ಒಂದು ಮುಖ್ಯ ರಸ್ತೆಯ ಸಾರ್ವ ಜನಿಕರನ್ನು ಭೇಟಿ ಮಾಡಿ, ಸಮಸ್ಯೆ ಆಲಿಸಿ ಸಾಧ್ಯವಾದಷ್ಟು ಪರಿಹಾರ ಕಂಡುಕೊಳ್ಳುವುದು ಇದರ ಪ್ರಮುಖ ಉದ್ದೇಶ. 

ಬೆಳಿಗ್ಗೆ 7.30ಕ್ಕೆ ಪ್ರತಿ ಮನೆ ಮನೆಗೆ ತೆರಳಿ ಕುಂದುಕೊರತೆ ಆಲಿಸಿದ ಮಂಜುನಾಥ್ ಅವರು, ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ಕೆಲಸ ಮಾಡಿದರು. 

ಈ ವೇಳೆ ಮಾತನಾಡಿದ ಅವರು, ಈ ಬಾರಿ ಉತ್ತಮ ಮಳೆಯಾಗಿಲ್ಲ. ಈ ಕಾರಣದಿಂದಾಗಿ ನೀರಿನ ಸಂಗ್ರಹವೂ ಕಡಿಮೆ ಇದೆ. ಜನರು ಮಿತವಾಗಿ ನೀರು ಬಳಸಿ. ಅವಶ್ಯಕತೆಗೆ ತಕ್ಕಂತೆ ನೀರು ಉಪಯೋಗಿಸಿ. ವಿನಾಕಾರಣ ನೀರು ಪೋಲು ಮಾಡುವುದು ಬೇಡ. ಮುಂದೆ ಬೇಸಿಗೆ ಬರುತ್ತಿದೆ. ಈಗಲೇ ಮಿತವಾಗಿ ನೀರು ಬಳಕೆ ಮಾಡಿದರೆ, ನೀರಿಗೆ ಹಾಹಾಕಾರ ಉಂಟಾಗುವುದಿಲ್ಲ. ಜನರೂ ಸಹ ಸ್ಪಂದಿಸಬೇಕು ಎಂದು ಮನವಿ ಮಾಡಿದರು. 

ಜಲಸಿರಿ ಯೋಜನೆಯಡಿ ಮನೆಗಳಿಗೆ ನಲ್ಲಿ ಸಂಪರ್ಕ ನೀಡಲಾಗುತ್ತಿದೆ. ಯಾವ ಮನೆಗೆ ಸಂಪರ್ಕ ನೀಡಲಾಗಿಲ್ಲ ಎಂಬ ಕುರಿತು ಮಾಹಿತಿ ನೀಡಿದರು. ಈ ವೇಳೆ ಸಂಪರ್ಕ ಸಿಗದವರಿಗೆ ಸ್ಥಳದಲ್ಲಿಯೇ ಸಂಬಂಧಪಟ್ಟವರಿಗೆ ಕರೆ ಮಾಡಿ ಆದಷ್ಟು ಬೇಗ ನಲ್ಲಿ ಸಂಪರ್ಕ ನೀಡುವಂತೆ ಸೂಚಿಸಿದರು. 

ಆರೋಗ್ಯ ಕಾರ್ಡ್ ಗಳನ್ನು ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ. ಬಾಪೂಜಿ ಹಾಗೂ ಎಸ್. ಎಸ್. ಹೈ-ಟೆಕ್ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ, ಪರೀಕ್ಷೆ ಸೇರಿದಂತೆ ಇತರೆ ಸೌಲಭ್ಯಗಳಿದ್ದು, ಈ ಕಾರ್ಡನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಜನರು ಸರತಿ ಸಾಲಿನಲ್ಲಿ ನಿಂತು, ಆಸ್ಪತ್ರೆಗೆ ಹೋಗಿ ಕಾರ್ಡ್ ಮಾಡುವ ಆಯಾಸ ತಪ್ಪಿಸುವ ಸಲುವಾಗಿ ಈ ಕಾರ್ಯ ಮಾಡಲಾಗುತ್ತಿದೆ ಎಂದು ಮಂಜುನಾಥ್ ಮಾಹಿತಿ ನೀಡಿದರು. 

ಇನ್ನು ಆರೋಗ್ಯ ನಿರೀಕ್ಷಕರು, ಎಂಜಿನಿಯರ್ ಹಾಗೂ ವಾರ್ಡ್ ದಫೇದಾರ್ ಅವರು ವಾರ್ಡ್‌ನ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಕಸ ಗುಡಿಸಿ ವಾರ್ಡ್‌ನ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿದರು. ಖಾಲಿ ಸೈಟ್‌ಗಳು, ಖಾಲಿ ಜಾಗದಲ್ಲಿ ಬಿದ್ದಿದ್ದ ಕಸ ತೆಗೆದು ಸ್ವಚ್ಚಗೊಳಿಸಿದರು. ಅಲ್ಲದೇ, ರಸ್ತೆ ಸಂಪೂರ್ಣವಾಗಿ ಸ್ವಚ್ಛವಾಗಿರುವುದನ್ನು ಕಂಡು ಸ್ಥಳೀಯರು ಸಂತಸ ವ್ಯಕ್ತಪಡಿಸಿದರು. 

ಈ ವೇಳೆ ವಾರ್ಡ್‌ ಅಧ್ಯಕ್ಷ ಮುರುಗೇಶ್, ಉಪಾಧ್ಯಕ್ಷ ಆರ್.ಟಿ.ಒ. ರಾಜು, ಪ್ರಮೋದ್, ಭರತ್ ಮೈಲಾರಿ, ನಿಖಿಲ್, ಬಸವರಾಜ್, ನೀಲಕಂಠಪ್ಪ, ಪ್ರಕಾಶ್ ಗೌಡ್ರು, ಯಶೋಧ, ಸರೋಜ, ಗುರುಗೌಡ ಹಾಗೂ ಇತರರು ಹಾಜರಿದ್ದರು.

error: Content is protected !!