ರೈಲ್ವೆ ಖಾಸಗೀಕರಣ ವಿರೋಧಿಸಿ ಸಿಐಟಿಯು ಪ್ರತಿಭಟನೆ

ರೈಲ್ವೆ ಖಾಸಗೀಕರಣ ವಿರೋಧಿಸಿ ಸಿಐಟಿಯು ಪ್ರತಿಭಟನೆ

ದಾವಣಗೆರೆ, ನ. 3- ದೇಶದ ಆರ್ಥಿಕತೆಯ ಜೀವಾಳ ರೈಲ್ವೆ ಇಲಾಖೆಯ ಖಾಸಗೀಕರಣ ವಿರೋಧಿಸಿ ಸಿಐಟಿಯು ಜಿಲ್ಲಾ ಘಟಕದ ವತಿಯಿಂದ `ಜನತೆಯನ್ನು ರಕ್ಷಿಸಿ, ದೇಶವನ್ನು ಉಳಿಸಿ’ ಎಂಬ ಘೋಷ ವಾಕ್ಯದೊಂದಿಗೆ ನಗರದ ರೈಲ್ವೆ ನಿಲ್ದಾಣದ ಮುಂಭಾಗ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ಇದೇ ವೇಳೆ ಸಿಐಟಿಯು ಜಿಲ್ಲಾ ಸಂಚಾಲಕ ಕೆ.ಹೆಚ್‌. ಆನಂದರಾಜ್ ಮಾತನಾಡಿ, ಜನರ ಜೀವನಾಡಿಯಾದ ರೈಲ್ವೆ ವಲಯವನ್ನು ಸಂಪೂರ್ಣವಾಗಿ ಖಾಸಗಿರಕರಣ ಮಾಡಲು ಕೇಂದ್ರ ಸರ್ಕಾರ ಅಸ್ತು ನೀಡಿದೆ ಎಂದರು.

ದೇಶದ ಆರ್ಥಿಕತೆಯ ಜೀವಾಳವಾದ ರೈಲ್ವೆ ವಲಯ ವ್ಯಾಪ್ತಿಯಲ್ಲಿ 7500 ರೈಲ್ವೆ ನಿಲ್ದಾಣಗಳ ಮೂಲಕ 13452 ಪ್ರಯಾಣಿಕ ರೈಲುಗಳು ಸಂಚರಿಸುತ್ತಿವೆ ಎಂದು ಮಾಹಿತಿ ನೀಡಿದರು.

ಈ ರೈಲುಗಳ ಮೂಲಕ 2040 ಕೋಟಿ ಪ್ರಯಾಣಿಕರು ನಿತ್ಯ ಸಂಚರಿಸುತ್ತಿದ್ದಾರೆ. ಇದರ ಜೊತೆ ಆಹಾರ ಧಾನ್ಯಗಳನ್ನು, ಸಾಮಾನ್ಯ ಜನರು ಬಳಕೆ ಮಾಡುವ ಅಗತ್ಯ ವಸ್ತುಗಳನ್ನು  ಮತ್ತು ಕೃಷಿ, ಕೈಗಾರಿಕಾ ಉತ್ಪನ್ನಗಳನ್ನು ಸಾಗಾಣಿಕೆ ಮಾಡಲು ಗೂಡ್ಸ್ ರೈಲುಗಳು ಸಂಚರಿಸುತ್ತಿವೆ. ಸುಮಾರು 1.42 ಶತಕೋಟಿ ಮೆಟ್ರಿಕ್ ಟನ್ ಸರಕುಗಳನ್ನು ಪ್ರತಿ ದಿನ ಸಾಗಾಣೆ ಮಾಡುತ್ತಿವೆ ಎಂದು ಹೇಳಿದರು.

ರೈಲ್ವೆ ವಲಯದ ಅಂಕಿ-ಅಂಶಗಳ ಪ್ರಕಾರ 2022-23 ರಲ್ಲಿ ಭಾರತೀಯ ರೈಲ್ವೆ ಇಲಾಖೆಯು 2.40 ಲಕ್ಷ ಕೋಟಿ ಆದಾಯ ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 49 ಸಾವಿರ ಕೋಟಿ ರೂ. ಲಾಭಂಶ ಗಳಿಸಿದೆ ಎಂದರು.

ಹೀಗಿದ್ದರೂ ಸಹ ಕೇಂದ್ರ ಸರ್ಕಾರ ರೈಲುಗಳನ್ನು ಮತ್ತು ನಿರ್ವಹಣೆಯನ್ನು ಶೇ. 100 ರಷ್ಟು ಖಾಸಗಿ ಹೂಡಿಕೆಗೆ ಅವಕಾಶ ಮಾಡಿಕೊ ಡುವ ಮೂಲಕ ರೈಲ್ವೆ ನಿಲ್ದಾಣ ಸೇರಿದಂತೆ ಅದಕ್ಕೆ ಸೇರಿರುವ ಎಲ್ಲಾ ಭೂಮಿಯನ್ನು ಖಾಸಗಿ ಕಂಪನಿ ಗಳಿಗೆ ಹಸ್ತಾಂತರ ಮಾಡಲಿದ್ದು, ಕಾರ್ಪೊರೇಟ್ ಕಂಪನಿಗಳ ಹಿತ ಕಾಯುವುದೇ ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಹನುಮಂತಪ್ಪ, ಮಂಜುಳ, ಗಜೇಂದ್ರ, ಫಾರೂಕ್, ಪ್ರಕಾಶ್, ಶಶಿ ಆಚಾರ್ ಮತ್ತಿತರರು ಭಾಗವಹಿಸಿದ್ದರು. 

error: Content is protected !!