ದಾವಣಗೆರೆ, ನ.1- ಜಿಲ್ಲೆಯ ದಾವಣಗೆರೆ, ಜಗಳೂರು, ಹೊನ್ನಾಳಿ, ನ್ಯಾಮತಿ, ಚನ್ನಗಿರಿ ಮತ್ತು ಹರಿಹರ ತಾಲ್ಲೂಕುಗಳಲ್ಲಿ ರೈತರು ಸುಮಾರು 30 ವರ್ಷಗಳಿಗಿಂತ ಹೆಚ್ಚು ಕಾಲ ಬಗರ್‍ಹುಕ್ಕುಂ ಸಾಗುವಳಿ ಮಾಡಿದ್ದು, ಕಲಂ ನಂ. 50, 53 ಮತ್ತು 57 ಅರ್ಜಿಗಳನ್ನು ಸಲ್ಲಿಸಿದ್ದು, ಸರ್ಕಾರದ ನಿಯಾಮಾವಳಿ ಪ್ರಕಾರ ಹೆಚ್ಚು ಜನರಿಗೆ ಹಕ್ಕುಪತ್ರ ವಿತರಣೆಯಾಗಿರುವುದಿಲ್ಲ. ಹಾಗಾಗಿ ಕೂಡಲೇ ಹಕ್ಕು ಪತ್ರಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿದ ರಾಜ್ಯ ರೈತ ಸಂಘದ ಮುಖಂಡರು ಜಿಲ್ಲಾಧಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಈ ಸಂಬಂಧ ಕಂದಾಯ ಸಚಿವ ಕೃಷ್ಣ ಭೈರೇ ಗೌಡರು 6 ತಿಂಗಳೊಳಗಾಗಿ ಇತ್ಯರ್ಥ ಪಡಿಸುವುದಾಗಿ ವಿಕಾಸಸೌಧದಲ್ಲಿ ಹೇಳಿದ್ದರೂ ಸಮಸ್ಯೆ ಬಗೆಹರಿದಿಲ್ಲ.
ರೈತರು ಸ್ವಂತ ಖರ್ಚಿನಲ್ಲಿ ರೂ. 3 ಲಕ್ಷದಿಂದ 8 ಲಕ್ಷದವರೆಗೂ ಬಂಡವಾಳ ಹಾಕಿ ಪಂಪ್‍ಸೆಟ್ ಹಾಕಿಸಿರುತ್ತಾರೆ. ಆದರೆ 7 ತಾಸು ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿದ್ದು, 5 ತಾಸು ಸಹ ವಿದ್ಯುತ್ ನೀಡುವುದಿಲ್ಲ. ವಿದ್ಯುತ್ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಬೇಕು.
ಮಳೆಯಾಶ್ರಿತ ಮತ್ತು ಪಂಪ್‍ಸೆಟ್‍ಗಳ ಮುಖಾಂತರ ರೈತರು ಮೆಕ್ಕೇಜೋಳ, ರಾಗಿ, ತೊಗರಿ, ಅವರೆ ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಿದ್ದು, ಕೃಷಿ ಇಲಾಖೆಯ ಸರ್ವೇ ಪ್ರಕಾರ ಶೇ.98 ರಷ್ಟು ಬೆಳೆ ನಷ್ಟವಾಗಿರುತ್ತದೆ. ಆದ್ದರಿಂದ ಬೆಳೆ ನಷ್ಟವನ್ನು ತುರ್ತಾಗಿ ಸರ್ಕಾರ ರೈತರ ಖಾತೆಗೆ ಜಮಾ ಮಾಡಬೇಕು.
ಕಂದಾಯ ಇಲಾಖೆ, ಸರ್ವೆ ಇಲಾಖೆ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಇನ್ನಿತರೆ ಇಲಾಖೆಗಳಲ್ಲಿ ಸಾರ್ವಜನಿಕರ ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಈ ಹಿಂದೆ ಉಚ್ಛ ನ್ಯಾಯಾಲಯಕ್ಕೆ ಹೇಳಿರುವಂತೆ, ಪತ್ರ ವ್ಯವಹಾರವನ್ನು 7 ದಿನಗಳಲ್ಲಿ, ಕಡತ ವ್ಯವಹಾರವನ್ನು 15 ದಿನಗಳಲ್ಲಿ ವಿಲೇವಾರಿ ಮಾಡಬೇಕು. ಆದರೆ ಸರ್ಕಾರಿ ಕಛೇರಿಗಳಲ್ಲಿ 3 ತಿಂಗಳಿನಿಂದ 3 ವರ್ಷಗಳಾದರೂ ಸಮಸ್ಯೆಗಳನ್ನು ಇತ್ಯರ್ಥ ಪಡಿಸುತ್ತಿಲ್ಲ.
ಅರ್ಜಿ ಸಲ್ಲಿಸಿದ 1 ತಿಂಗಳ ನಂತರ ರೈತರು ಹಾಗೂ ಸಾರ್ವಜನಿಕರು ಕಛೇರಿಗಳಿಗೆ ಅಲೆದಾಡಿ ದರೆ ಆ ದಿನ ಕೂಲಿ, ಬಂದು ಹೋಗುವ ಖರ್ಚು ಮತ್ತು ಊಟದ ಖರ್ಚನ್ನು ಸರ್ಕಾರವೇ ಭರಿಸಬೇಕಾಗುತ್ತದೆ.
ಒಂದು ವೇಳೆ 60 ವರ್ಷ ವಯಸ್ಸಿನ ವೃದ್ಧರು ಅರ್ಜಿ ಸಲ್ಲಿಸಿದ್ದರೆ, ಅಂತಹ ವೃದ್ಧರಿಗೆ ವಿಶ್ರಾಂತಿ ಕೊಠಡಿಯನ್ನು ಸರ್ಕಾರವೇ ಒದಗಿಸಬೇಕು.
ಈ ಎಲ್ಲ ಬೇಡಿಕೆಗಳನ್ನೂ ಇದೇ ದಿನಾಂಕ 20ರ ಒಳಗಾಗಿ ಇತ್ಯರ್ಥ ಪಡಿಸಬೇಕು. ವಿಳಂಬವಾದಲ್ಲಿ ಜಿಲ್ಲೆಯ ಎಲ್ಲಾ ರೈತರು ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ ತಮ್ಮ ಕಛೇರಿಯ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ರಾಜ್ಯ ರೈತ ಸಂಘ ಒತ್ತಾಯಿಸಿತು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಮಾಯಕೊಂಡ ಅಶೋಕ, ಉಪಾಧ್ಯಕ್ಷ ರಾಂಪುರದ ಬಸವರಾಜ, ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕು ಮಾರ್, ಮುಖಂಡರಾದ ಅಣಬೇರು ಕುಮಾರಸ್ವಾಮಿ, ಪ್ರತಾಪ್ ಮಾಯಕೊಂಡ, ಶಿವಮೂರ್ತಪ್ಪ, ನಾಗರ ಕಟ್ಟೆ ಜಯನಾಯ್ಕ, ಚಿನ್ನಸಮುದ್ರ ಭೀಮನಾಯ್ಕ, ಹೆಬ್ಬಾಳ್ ರಾಜಯೋಗಿ ಎಂ.ಆರ್, ಕೋಗಳಿ ಮಂಜುನಾಥ್, ತಿರುಮಲೇಶ್ ಮಿಯ್ಯಾಪುರ, ಚೌಡಪ್ಪ ನರಗನಹಳ್ಳಿ, ಬಾಡಾದ ಹನುಮಂತಪ್ಪ, ದಶರಥ, ಅನ್ವೇರಿ ಮಂಜುನಾಥ್ ಮತ್ತಿತರರು ಹಾಜರಿದ್ದರು.