ಇಂದಿರಾ ಗಾಂಧಿಗೆ ಭಾರತೀಯರ ಹೃದಯದಲ್ಲಿ ಮಾತೃಸ್ಥಾನ

ಇಂದಿರಾ ಗಾಂಧಿಗೆ ಭಾರತೀಯರ ಹೃದಯದಲ್ಲಿ ಮಾತೃಸ್ಥಾನ

ತೊಟ್ಟಿಲು ತೂಗುವ ಕೈ ದೇಶದ ಚುಕ್ಕಾಣಿ ಹಿಡಿದು, ಸಮರ್ಥ ಆಡಳಿತ ನೀಡಬಲ್ಲದು ಎಂದು ಜಗತ್ತಿಗೇ ತೋರಿಸಿದ ಇಂದಿರಾ ಗಾಂಧಿ:  – ಡಿ. ಬಸವರಾಜ್, ಕೆಪಿಸಿಸಿ ವಕ್ತಾರ

ದಾವಣಗೆರೆ, ನ.1- ದೇಶದ ಪ್ರಪ್ರಥಮ ಮಹಿಳಾ ಪ್ರಧಾನ ಮಂತ್ರಿ, ದೇಶ ಕಂಡ ಅಪ್ರತಿಮ ನಾಯಕಿ, ಭಾರತ ರತ್ನ ಶ್ರೀಮತಿ ಇಂದಿರಾ ಗಾಂಧಿ ಅವರು ಬಡವರ ಪರ, ಮಹಿಳೆಯರ ಪರ, ರೈತರು, ಕಾರ್ಮಿಕರು, ದೀನ ದಲಿತರ ಪರ ಕೈಗೊಂಡ ಕೆಲಸ ಕಾರ್ಯಗ ಳಿಂದಾಗಿ ಇಂದಿಗೂ ಭಾರತೀಯರ ಹೃದಯ ದಲ್ಲಿ ಮಾತೃ ಸ್ಥಾನವನ್ನು ಹೊಂದಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ವಕ್ತಾರರು ಹಾಗೂ ಕರ್ನಾಟಕ ಸರ್ಕಾರದ ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಡಿ. ಬಸವರಾಜ್ ಅವರು ಇಂದಿರಾ ಗಾಂಧಿಯವರನ್ನು ಸ್ಮರಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಇಂಟೆಕ್ ವಿಭಾಗದಿಂದ ನಿನ್ನೆ ಏರ್ಪಡಿಸಲಾಗಿದ್ದ    ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರ 39ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅವರು ಮಾತನಾಡಿದರು.

ಇಂದಿರಾ ಗಾಂಧಿ ಅವರ ಪುಣ್ಯತಿಥಿಯನ್ನು ರಾಷ್ಟ್ರೀಯ ಸಂಕಲ್ಪ ದಿನವನ್ನಾಗಿ ದೇಶಾದ್ಯಂತ ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಇಂದಿರಾ ಗಾಂಧಿಯವರು 15 ವರ್ಷಗಳ ಕಾಲ ದೇಶದ ಪ್ರಧಾನ ಮಂತ್ರಿಗಳಾಗಿ ದೇಶ ವನ್ನು ಮುನ್ನಡೆಸಿದರು. ಕೇವಲ ಶ್ರೀಮಂತರಿಗೆ ಮೀಸಲಾಗಿದ್ದ ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡುವ ಮೂಲಕ ಬಡಜನರಲ್ಲಿ ಆರ್ಥಿಕ ಶಕ್ತಿಯನ್ನು ತುಂಬಿದರು. ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸಿ, `ಉಳುವವನೇ ಹೊಲದೊಡೆಯ’ ಎಂಬ  ಕ್ರಾಂತಿಕಾರಿಕ ಕಾಯ್ದೆ ಜಾರಿಗೊಳಿಸಿ, ಲಕ್ಷಾಂತರ ಬಡ ರೈತರಿಗೆ  ಭೂಮಿ ದೊರಕಿಸಿಕೊಟ್ಟರು. ದೇಶದಲ್ಲಿ ಇಪ್ಪತ್ತು ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೊಳಿಸಿ, ಬಡತನ ನಿರ್ಮೂಲನೆಗೆ ಕಟಿಬದ್ಧವಾಗಿ ಶ್ರಮಿಸಿದರು. ಭಾರತ  ದೇಶಕ್ಕೆ  ಇಂದಿರಾ ಗಾಂಧಿ ಅವರ ದೇಶ ಸೇವೆ ಅನನ್ಯ ಎಂದು ಅವರು ಸ್ಮರಿಸಿದರು.

ದೇಶವಿಂದು ಇಷ್ಟೊಂದು ಪ್ರಗತಿ ಸಾಧಿಸಲು ಅಂದಿನ  ಪ್ರಧಾನ ಮಂತ್ರಿ   ಇಂದಿರಾ ಗಾಂಧಿಯವರ ದೂರ ದೃಷ್ಟಿಯೇ ಕಾರಣ ಎಂದು ಬಸವರಾಜ್ ಪ್ರತಿಪಾದಿಸಿದರು. ಭಾರತ ದೇಶದಲ್ಲಿ ಆಹಾರದ ಕೊರತೆ ಉಂಟಾದಾಗ ಹಸಿರು ಕ್ರಾಂತಿಗೆ ಒತ್ತು ನೀಡಿ, ಆಹಾರ ಸಾವಲಂಬನೆಗೆ ಪ್ರಯತ್ನಿಸಿ ಯಶಸ್ವಿಯಾದರು. ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನ ಭಾರತದೊಡನೆ ಯುದ್ಧ ಸಾರಿದಾಗ ಯುದ್ಧ ಭೂಮಿಗೆ ತೆರಳಿ ಭಾರತೀಯ ಸೈನಿಕರಿಗೆ ಹುರಿದುಂಬಿಸಿ ಭಾರತ ದೇಶಕ್ಕೆ ಜಯ ತಂದುಕೊಟ್ಟ ಕೀರ್ತಿ ಇಂದಿರಾ ಗಾಂಧಿಗೆ ಸಲ್ಲುತ್ತದೆ ಎಂದು ಅವರು ತಿಳಿಸಿದರು.

ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಜಯ ಗಳಿಸಿದ್ದಕ್ಕಾಗಿ ಅಂದಿನ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಇಂದಿರಾ ಗಾಂಧಿ ಅವರನ್ನು ದುರ್ಗಾದೇವಿಗೆ ಹೋಲಿಕೆ ಮಾಡಿ ಲೋಕಸಭಾ ಅಧಿವೇಶನದಲ್ಲಿ ಪ್ರಶಂಸೆ ಮಾಡಿದ್ದರು ಎಂದರು.

ತೊಟ್ಟಿಲು ತೂಗುವ  ಕೈ ದೇಶದ ಆಡಳಿತದ ಚುಕ್ಕಾಣಿಯನ್ನು ಹಿಡಿದು ಯಶಸ್ವಿಯಾಗಿ,  ಸಮರ್ಥವಾಗಿ ನಡೆಸಬಲ್ಲದು ಎಂಬುದನ್ನು ಸಾಧಿಸಿ,  ಜಗತ್ತಿಗೇ ತೋರಿಸಿದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ. ಅವರ ವಿಚಾರಧಾರೆಗಳು ದೇಶಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಇಂದಿಗೂ ಅಡಿಪಾಯವಾಗಿವೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್  ಸಮಿತಿಯ ಇಂಟಕ್ ಅಧ್ಯಕ್ಷ ಕೆ.ಎಂ ಮಂಜು ನಾಥ್, ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಎನ್‌.ಎಸ್ ವೀರಭದ್ರಪ್ಪ, ಬಿ.ಹೆಚ್. ಉದಯ ಕುಮಾರ್,  ಡಿ. ಶಿವಕುಮಾರ್, ನವೀನ್ ಕುಮಾರ್, ಗಿರಿಧರ್  ಸಾತಲ್, ಕೆ.ಬಿ. ಮಲ್ಲಿಕಾರ್ಜುನ್, ಸುರೇಶ್ ಬಿ.ಎಸ್. ಆರಿಫ್ ಖಾನ್, ಮುಬಾರಕ್ ಮುಂತಾದವರು ಭಾಗವಹಿಸಿದ್ದರು.

error: Content is protected !!