ಹೊನ್ನಾಳಿ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ
ಹೊನ್ನಾಳಿ, ನ.1- ಮಹರ್ಷಿ ವಾಲ್ಮೀಕಿ, ಭರತ ಭೂಮಿಯಲ್ಲಿ ಜನಿಸಿದ್ದು ನಮ್ಮ ಸುಕೃತ ಎಂದು ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಂತರಿಕ ಗುಣಮಟ್ಟ ಭರವಸಾ ಕೋಶ, ಯುವ ರೆಡ್ ಕ್ರಾಸ್ ಘಟಕ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆದಿ ಕವಿ, ಮಹಾ ಕವಿ ಮತ್ತು ಕವಿಗಳ ಕವಿ ಮಹರ್ಷಿ ವಾಲ್ಮೀಕಿ ಭರತ ಭೂಮಿಯಲ್ಲಿ ಜನಿಸಿದ್ದು ನಮ್ಮ ಸುಕೃತ, ಆದರೆ ಶ್ರೀ ರಾಮಾಯಣ ಮಹಾಕಾವ್ಯಕ್ಕೆ ಸಿಕ್ಕ ಜನಪ್ರಿಯತೆ ಅದನ್ನು ರಚಿಸಿದ ವಾಲ್ಮೀಕಿ ಮಹರ್ಷಿಗಳಿಗೆ ಸಿಗಲಿಲ್ಲ ಎಂದು ವಿಷಾದಿಸಿದರು. ರಾಮ ಶ್ರೀ ರಾಮನಾದದ್ದು ವಾಲ್ಮೀಕಿಯಿಂದ. ಅರಮನೆ ಸಾಹಿತ್ಯವನ್ನು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿದ್ದು ಮಹರ್ಷಿ ವಾಲ್ಮೀಕಿ. ರಾಮಾಯಣ ಎಂದರೆ ವಾಲ್ಮೀಕಿಯ ವಿದ್ಯೆ, ವ್ಯಕ್ತಿತ್ವ ಹಾಗೂ ವಿದ್ವತ್. ಅಖಂಡ ಭಾರತವನ್ನು ನೀತಿ ಮತ್ತು ಮೌಲ್ಯದ ಆಧಾರದ ಮೇಲೆ ಒಗ್ಗೂಡಿಸಿದ್ದು ರಾಮಾಯಣ ಮಹಾಕಾವ್ಯದ ಮೂಲಕ ಎಂದು ಹೇಳಿದರು.
ರಾಮಾಯಣ ಮಹಾಕಾವ್ಯದಲ್ಲಿ ಉಲ್ಲೇಖಿಸಿ ರುವ ರಾಜಧರ್ಮ, ಪ್ರಜಾಧರ್ಮ ಇಂದಿಗೂ ಪ್ರಸ್ತುತ. ಅಧರ್ಮದಿಂದ ನಾಡನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ರಾಮಾಯಣ ಮಹಾಕಾವ್ಯದಲ್ಲಿ ಉಲ್ಲೇಖಿಸಿರುವ ಮಹರ್ಷಿ ವಾಲ್ಮೀಕಿ ಪೂಜ್ಯನೀಯ ಎಂದು ಹೇಳಿದರು.
ಕನ್ನಡ ವಿಭಾಗದ ಅತಿಥಿ ಉಪನ್ಯಾಸಕ ಡಾ. ಪ್ರಶಾಂತ ಕುಮಾರ ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಜ್ಯಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕ ಪುರುಷೋತ್ತಮ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರೊ. ಬೆಳ್ಳುಳ್ಳಿ ಕೊಟ್ರೇಶ ವಂದಿಸಿದರು.